ಬೆಳಗಾವಿ, ಡಿ 06 (DaijiworldNews/MR): ಕಾರು ಅಪಘಾತ ಪ್ರಕರಣವನ್ನು ಹಲ್ಲೆ ಎಂದು ಬಿಂಬಿಸಿ ತಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದ ಮಣಿಕಠ ರಾಥೋಡ್ ಹಾಗೂ ಬಿಜೆಪಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಕಂಠ ರಾಥೋಡ್ ಮೇಲಿನ ಹಲ್ಲೆ ಪ್ರಕರಣದ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದ ಬಯಲಾಗಿದೆ. ಅಪಘಾತವನ್ನು ಹಲ್ಲೆ ಎಂದು ಕಥೆ ಕಟ್ಟಿ, ನನ್ನ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ನಾಯಕರು ಈಗ ಏನು ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ.
ಚಿತ್ತಾಪುರದಲ್ಲಿ ಮಣಿಕಂಠ ರಾಥೋಡ್ ಒಂದು ದೂರು ಕೊಟ್ಟಿದ್ದ. ಆತ ಬಿಜೆಪಿ ಅಭ್ಯರ್ಥಿ. ಚಿತ್ತಾಪುರದಿಂದ ಮಾಲಗತ್ತಿಗೆ ಹೋಗುವಾಗ ಆತನ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಿದ್ದ.
ಆಲ್ಟ್ರೋಜ್ ಕಾರಿನ ಮೇಲೆ 8 ರಿಂದ 10 ಜನ ಹಲ್ಲೆ ಮಾಡಿದ್ದರು ಎಂದು ದೂರು ಕೊಟ್ಟಿದ್ದ. ಅಧಿಕಾರಿಗಳು ಮತ್ತು ರಾಜಕೀಯ ವಿರೋಧಿಗಳು ನನ್ನ ಹಲ್ಲೆ ಮಾಡುತ್ತಾರೆ ಎಂದು ಹೇಳಿದ್ದ. ಆದರೆ, ರಾಥೋಡ್ ಮೇಲೆ ಸಾಕಷ್ಟು ಆರೋಪಗಳಿದ್ದವು. ಅಕ್ಕಿ ಕಳ್ಳತನದಲ್ಲಿ 22 ಕೇಸ್ ಇದೆ. ಹಾಲಿನ ಪೌಡರ್ ಕಳ್ಳತನದಲ್ಲಿ 1 ಕೇಸ್, ಇನ್ನು ಮೂರು ಪ್ರಕರಣಗಳಲ್ಲಿ ಈಗಾಗಲೇ ಆರೋಪ ಸಾಬೀತಾಗಿದೆ. ಅದು ಬಿಜೆಪಿ ಸರ್ಕಾರದ ಅವಧಿಯಲ್ಲೇ ಆಗಿರುವುದು ಎಂದು ತಿಳಿಸಿದರು.
ಇವನ ಮೇಲೆ ಇಷ್ಟೆಲ್ಲಾ ಕೇಸ್ ಇದ್ದರೂ ಬಿಜೆಪಿ ಇವನಿಗೆ ಟಿಕೆಟ್ ನೀಡಿತ್ತು. ಇವನು ದೂರು ಕೊಟ್ಟಾಗ ಇಡೀ ಬಿಜೆಪಿ ಇವನ ಹಿಂದೆ ಇತ್ತು. ಕಲಬುರಗಿಯಲ್ಲಿ ಯಾರೂ ಬಿಜೆಪಿ ಮುಖಂಡರು ಉಳಿದಿಲ್ಲ. ಅಲ್ಲಿಗೆ ಎನ್.ರವಿಕುಮಾರ್ ಒಬ್ಬರು ಮಾತ್ರ ಇದ್ದಾರೆ. ಅವರು ಸಹ ಅವತ್ತು ಅವನಿಗೆ ಏನಾದರೂ ಆದ್ರೆ ಪ್ರಿಯಾಂಕಾ ಖರ್ಗೆ ಹೊಣೆ ಅಂತೆಲ್ಲ ಹೇಳಿದ್ದರು.