ಮಧ್ಯಪ್ರದೇಶ, ಡಿ 08 (DaijiworldNews/AA): ನಮ್ಮ ಕನಸನ್ನು ನನಸಾಗಿಸಿಕೊಳ್ಳಲು ಹಲವಾರು ತ್ಯಾಗಗಳನ್ನು ಹಾಗೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇದೇ ರೀತಿ ಸರನ್ಶ್ ಗುಪ್ತಾ ಅವರು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸನ್ನು ನನಸಾಗಿಸಿಕೊಳ್ಳಲು ಲಕ್ಷಾಂತರ ರೂ. ಸಂಬಳ ಬರುತ್ತಿದ್ದ ಕೆಲಸವನ್ನು ಬಿಡುವ ಮೂಲಕ ದಿಟ್ಟ ಹೆಜ್ಜೆಯನ್ನು ಇಡುತ್ತಾರೆ.
ಹೌದು.. ಮಧ್ಯಪ್ರದೇಶದ ಶಿವಪುರಿ ಮೂಲದ 22 ವರ್ಷದ ಸರನ್ಶ್ ಗುಪ್ತಾ ಅವರ ತಂದೆ ಪಂಚಾಯತ್ ಕಾರ್ಯದರ್ಶಿ ಮತ್ತು ಅವರ ತಾಯಿ ಗೃಹಿಣಿಯಾಗಿರುತ್ತಾರೆ. ಆದರೂ ಸಹ ಸರನ್ಶ್ ವಿದ್ಯಾಭ್ಯಾಸಕ್ಕೆ ಅವರ ಕುಟುಂಬ ಪ್ರೋತ್ಸಾಹ ನೀಡಿತು.
ಶಿವಪುರಿಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಸರನ್ಶ್, ಬಳಿಕ ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾದರು. ನಂತರ ಸಿವಿಲ್ ಎಂಜಿನಿಯರಿಂಗ್ ಪದವಿಗಾಗಿ IIT BHU ಗೆ ಪ್ರವೇಶ ಪಡೆದರು. ಇನ್ನು ಕಾಲೇಜಿನಲ್ಲಿ ಕಂಪನಿಯೊಂದರ 16 ಲಕ್ಷ ರೂ. ಕ್ಯಾಂಪಸ್ ಆಫರ್ ದೊರೆತಿತ್ತು. ಆದರೆ ಐಎಎಸ್ ಅಧಿಕಾರಿಯಾಗಬೇಕೆಂಬ ಅವರ ಕನಸನ್ನು ನನಸಾಗಿಸಿಕೊಳ್ಳಲು ಒಂದು ವರ್ಷದ ನಂತರ ಕೆಲಸ ಮುಂದುವರೆಸಲಿಲ್ಲ.
ಐಎಎಸ್ ಅಧಿಕಾರಿಯಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಸರನ್ಶ್ ಮೊದಲ ಪ್ರಯತ್ನದಲ್ಲೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಸರನ್ಶ್ ಅವರು ಭಾರತದಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿವ ಅತ್ಯಂತ ಕಿರಿಯ ಅಧಿಕಾರಿಯಾಗಿದ್ದಾರೆ. ಇನ್ನು ಸರನ್ಶ್ ಅವರಿಗೆ ವಿವಿಧ ಕಂಪೆನಿಗಳಿಂದ ಆಫರ್ ಲೆಟರ್ ಗಳು ಬಂದಿದ್ದವು. ಆದರೆ ಸರನ್ಶ್ ಅವರು ರಾಷ್ಟ್ರಕ್ಕೆ ಸೇವೆ ಮಾಡಬೇಕೆಂಬ ಉದ್ದೇಶದಿಂದ ಈ ಆಫರ್ ಗಳನ್ನೆಲ್ಲ ತಳ್ಳಿಹಾಕಿ ಇಂದು ಐಎಎಸ್ ಅಧಿಕಾರಿಯಗಿದ್ದಾರೆ.
ಇನ್ನು ಸರನ್ಶ್ ಅವರು 2023 ರ AIR ಪರೀಕ್ಷೆಯಲ್ಲಿ 20 ನೇ ಸ್ಥಾನವನ್ನು ಗಳಿಸಿದರು. ಹೀಗೆ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡುವ ಮೂಲಕ ಸರನ್ಶ್ ಅವರು ಅನೇಕ ಯುವಕರಿಗೆ ಮಾದರಿಯಾಗಿದ್ದಾರೆ.