ನವದೆಹಲಿ, ಡಿ 08 (DaijiworldNews/MS): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಪ್ರಮುಖ ಸಾಲದ ಬಡ್ಡಿ ದರವನ್ನು (ರೆಪೋ ದರ) ಸತತ ಐದನೇ ಬಾರಿಗೆ ಯಥಾಸ್ಥಿತಿಯಲ್ಲಿ ಅಂದರೆ ಶೇ. 6.5ರಲ್ಲೇ ಇರಿಸಲು ತೀರ್ಮಾನಿಸಿದೆ.
ಕಳೆದ ಮೂರು ದಿನಗಳಿಂದ ನಡೆದ ಆರ್ಬಿಐನ ಹಣಕಾಸು ನೀತಿ ಸಭೆಯ ಬಳಿಕ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಡ್ಡಿ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲದದೇ ಸಾಲಗಾರರಿಗೆ ದೊಡ್ಡ ರಿಲೀಫ್ ನೀಡಿದರೂ, ರೆಪೋ ದರ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಇದರಿಂದ ತೀವ್ರ ನಿರಾಸೆಯಾಗಿದೆ. ಸಾಲಗಳ ಇಎಂಐ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಿದ್ದ ಆರ್ಬಿಐ ನಿರ್ಧಾರ ಕಹಿ ನೀಡಿದೆ. ಇದೇ ವರ್ಷ ಫೆಬ್ರವರಿ 8, 2023 ರಂದು ಸರ್ಕಾರವು ಕೊನೆಯದಾಗಿ ರೆಪೋ ದರವನ್ನು ಹೆಚ್ಚಿಸಿತ್ತು.
ಈಗಾಗಲೇ ರೆಪೋ ದರವನ್ನು ಕಡಿಮೆ ಮಾಡಲು ರಿಸರ್ವ್ ಬ್ಯಾಂಕ್ ಮೇಲೆ ಒತ್ತಡ ಹೆಚ್ಚುತ್ತಿದೆ. ರೆಪೋ ದರ ಯಥಾಸ್ಥಿತಿಯಲ್ಲಿರುವುದರಿಂದ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರಗಳು ಸಹ ಬದಲಾಗದೆ ಉಳಿಯುವ ಸಾಧ್ಯತೆ ಹೆಚ್ಚಿದೆ.