ನವದೆಹಲಿ, ಡಿ 08 (DaijiworldNews/AA): ಅಕ್ರಮ ಆಸ್ತಿಗಳಿಕೆ ಆರೋಪ ಎದುರಿಸುತ್ತಿರುವ ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ವಿರುದ್ಧ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಹೈಕೋರ್ಟ್ ಆದೇಶದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿದೆ. ಇಡಿ ಸಲ್ಲಿಸಿದ್ದ ದಾಖಲೆಗಳ ಆಧಾರದ ಮೇಲೆ 2022 ರಲ್ಲಿ ಸಚಿವ ಜಮೀರ್ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿತ್ತು. ಬಳಿಕ ಜಮೀರ್ ಆದಾಯದಲ್ಲಿ ಶೇ. 2000 ಪಟ್ಟು ಏರಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಜಮೀರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನು ನ. 20 ರಂದು ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ ಮಾಡಿತ್ತು.
ಈ ಹಿನ್ನೆಲೆ ಜಮೀರ್ ಪ್ರಕರಣದ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ಅರ್ಜಿ ರದ್ದು ಮಾಡಿ ಆದೇಶಿಸಿದ್ದರು. ಇದರ ನಡುವೆ ಸುಪ್ರಿಂನಲ್ಲಿ ಈಗಾಗಲೇ ಮೇಲ್ಮನವಿ ಬಾಕಿ ಇದ್ದ ಹಿನ್ನೆಲೆ ಹೈಕೋರ್ಟ್ ಆದೇಶವನ್ನು ತಡೆಹಿಡಿಯುವಂತೆ ಜಮೀರ್ ಪರ ವಕೀಲರು ಮನವಿ ಸಲ್ಲಿಸಿದ್ದರು. ಮನವಿಯಂತೆ 30 ದಿನಗಳ ಕಾಲ ತನ್ನ ತೀರ್ಪನ್ನು ಅಮಾನತಿನಲ್ಲಿಟ್ಟು ಹೈಕೋರ್ಟ್ ಆದೇಶ ಹೊರಡಿಸಿತ್ತು.