ಬೆಂಗಳೂರು, ಡಿ 08 (DaijiworldNews/AA): ಹಿರಿಯ ನಟಿ ಲೀಲಾವತಿ ಅವರ ಅಂತಿಮ ಸಂಸ್ಕಾರವನ್ನು ಅವರ ನೆಚ್ಚಿನ ನೆಲಮಂಗಲ ಸಮೀಪದ ಸೋಲದೇವನಹಳ್ಳಿ ತೋಟದಲ್ಲಿ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ‘ಇಂದು ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ಮಧ್ಯಾಹ್ನ ಮೆರವಣಿಗೆ ಮೂಲಕ ಸೋಲದೇವನಹಳ್ಳಿಯ ತೋಟಕ್ಕೆ ತೆರಳಲಾಗುತ್ತದೆ. ಬಳಿಕ ಅಲ್ಲಿ ಮಣ್ಣು ಮಾಡುವ ಮುಖಾಂತರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಲಾಗಿದೆ.
ಲೀಲಾವತಿ ಅವರ ಅಂತಿಮ ದರ್ಶನದ ಭದ್ರತೆಗಾಗಿ 500 ಪೊಲೀಸರನ್ನು ನಿಯೋಜಿಸಲಾಗಿದೆ. ಎಸ್ಪಿ, ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ 6 ಮಂದಿ ಡಿವೈಎಸ್ಪಿ, 15 ಮಂದಿ ಇನ್ಸೆಪೆಕ್ಟರ್ಸ್ ಹೆಚ್ಚುವರಿಯಾಗಿ ಕೆಎಸ್ಆರ್ ಪಿ ತುಕಡಿಗಳ ನಿಯೋಜನೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ’ಎಂದು ತಿಳಿಸಿದರು.
ಇನ್ನು ಲೀಲಾವತಿಯವರ ಅಂತಿಮ ದರ್ಶನಕ್ಕೆ ಇಪ್ಪತ್ತು ಸಾವಿರದಷ್ಟು ಜನರು ಬರುವ ಸಾಧ್ಯತೆ ಇದೆ. ಅದರಂತೆ ಸಾರ್ವಜನಿಕ ದರ್ಶನಕ್ಕೆ ಬರುವವರಿಗೆ ಯಾವುದೇ ರೀತಿ ಅಡೆತಡೆಗಳು ಆಗದಂತೆ ಸಿದ್ದತೆ ಮಾಡಿಕೊಳ್ಳಲಾಗಿದೆ. ವಿವಿಐಪಿಗಳಿಗೆ ಹಾಗೂ ಸಿನಿಮಾ ನಟ ನಟಿಯರಿಗೆ ದರ್ಶನಕ್ಕಾಗಿ ಪ್ರತ್ಯೇಕವಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.