ಹೈದರಾಬಾದ್, ಡಿ 09(DaijiworldNews/AK): ಕರ್ನಾಟಕದ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ ಮಾದರಿಯಲ್ಲಿ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಬಡವರಿಗೆ 10 ಲಕ್ಷ ರೂ.ಗಳ ಆರೋಗ್ಯ ವಿಮೆ ಯೋಜನೆಗಳಿಗೆ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಶನಿವಾರ ಚಾಲನೆಯನ್ನು ನೀಡಿದರು.
ವಿಧಾನಸಭೆಯ ಆವರಣದಲ್ಲಿ ಯೋಜನೆಗಳಿಗೆ ಚಾಲನೆ ನೀಡಿದ ರೆಡ್ಡಿ, ಸೋನಿಯಾ ಗಾಂಧಿಯವರು ತೆಲಂಗಾಣ ರಾಜ್ಯ ರಚನೆಯ ತನ್ನ ಭರವಸೆಯನ್ನು ಈಡೇರಿಸಿದ ರೀತಿಯಲ್ಲೇ ಕಾಂಗ್ರೆಸ್ ಸರಕಾರವು ಆರು ಚುನಾವಣಾ ಗ್ಯಾರಂಟಿಗಳನ್ನು ನೂರು ದಿನಗಳಲ್ಲಿ ಜಾರಿಗೊಳಿಸುವ ಮೂಲಕ ತೆಲಂಗಾಣದ ಜನತೆಯ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ಹೇಳಿದರು.
2009ರಂದು ಆಗಿನ ಯುಪಿಎ ಸರಕಾರವು ತೆಲಂಗಾಣ ರಾಜ್ಯ ರಚನೆಯನ್ನು ಘೋಷಿಸಿತ್ತು, ಹೀಗಾಗಿ ಡಿ.9 ತೆಲಂಗಾಣಕ್ಕೆ ಉತ್ಸವದ ದಿನವಾಗಿದೆ ಎಂದರು.
ರಾಜೀವ್ ಗಾಂಧಿ ಆರೋಗ್ಯಶ್ರೀ ಯೋಜನೆಯಡಿ ಬಡವರಿಗೆ 10 ಲಕ್ಷ ರೂ.ಗಳ ವಿಮೆ ರಕ್ಷಣೆಯನ್ನು ಒದಗಿಸಲಾಗುವುದು. ಮಹಾಲಕ್ಷ್ಮಿಯೋಜನೆಯಡಿ ಮಹಿಳೆಯರು ರಾಜ್ಯ ಸರಕಾರದ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.