ಲಕ್ನೋ, ಡಿ 10 (DaijiworldNews/MS): ಬಹುಜನ ಸಮಾಜ ಪಕ್ಷ (ಬಿಎಸ್ಪಿ) ವರಿಷ್ಠೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಭಾನುವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದೊಳಗೆ ತಮ್ಮ ಉತ್ತರಾಧಿಕಾರಿ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಲಕ್ನೋದಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಈ ಘೋಷಣೆ ನಡೆದಿದೆ. ಈ ಕಾರ್ಯತಂತ್ರದ ಕ್ರಮವು ಬಿಎಸ್ಪಿಯ ಭವಿಷ್ಯದ ನಾಯಕತ್ವದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮಾಯಾವತಿಯವರ ಕಿರಿಯ ಸಹೋದರ ಆನಂದ್ ಕುಮಾರ್ ಅವರ ಪುತ್ರರಾಗಿರುವ ಆಕಾಶ್ ಆನಂದ್, 2016 ರಲ್ಲಿ ಬಿಎಸ್ಪಿಗೆ ಸೇರ್ಪಡೆಗೊಂಡು 2019 ರಲ್ಲಿ ಲೋಕಸಭಾ ಚುನಾವಣೆಯ ಸಮಯದಲ್ಲಿ ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿ ಪ್ರಮುಖವಾಗಿ ಕಾಣಿಸಿಕೊಂಡಿದ್ದರು.
ಕಾಂಗ್ರೆಸ್ ಮತ್ತು ಇತರೆ ರಾಜಕೀಯ ಪಕ್ಷಗಳ ವಂಶಾಡಳಿತವನ್ನು ಬಹಿರಂಗವಾಗಿ ಟೀಕಿಸುತ್ತಿದ್ದ ಬಹುಜನ ಸಮಾಜ ಪಾರ್ಟಿ ವರಿಷ್ಠ ನಾಯಕಿ ಮಾಯಾವತಿ ಅವರು ಈಗ ಪಕ್ಷದಲ್ಲಿ ತಮ್ಮ ಸಂಬಂಧಿಕರಿಗೇ ಮಣೆ ಹಾಕುವ ಮೂಲಕ ತಾವೂ ಅದೇ ಹಾದಿ ತುಳಿದಿದ್ದು, ಈಗ ನಾಯಕಿಯೇ ಮಾತು ತಪ್ಪಿದ್ದಾರೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.