ನವದೆಹಲಿ, ಡಿ 12 (DaijiworldNews/AK): ಲೋಕಸಭೆಯಿಂದ ಉಚ್ಛಾಟನೆ ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಸೋಮವಾರ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದಾರೆ.
ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ನಗದು ಮತ್ತು ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ ಆರೋಪದಲ್ಲಿ ಮಹುವಾ ಅವರು ತಪ್ಪಿತಸ್ಥರೆಂದು ಹೇಳಿರುವ ನೈತಿಕ ಸಮಿತಿಯ ವರದಿಯನ್ನು ಅಂಗೀಕರಿಸಿರುವ ಲೋಕಸಭೆಯು, ಶುಕ್ರವಾರ ಮಹುವಾ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಉಚ್ಛಾಟಿಸಿತ್ತು.
ಅದಾನಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಮಹುವಾ ಹಣ ಪಡೆದಿದ್ದಾರೆ ಎನ್ನಲಾಗಿದ್ದು, ಅನಧಿಕೃತ ಜನರಿಗೆ ತನ್ನ ಸಂಸತ್ತಿನ ಲಾಗಿನ್ ಐಡಿಗಳನ್ನು ಹಂಚಿಕೊಂಡಿರುವ ಆರೋಪವೂ ಅವರ ಮೇಲೆ ಕೇಳಿಬಂದಿದೆ.
ಇದೀಗ ತಮ್ಮನ್ನು ಲೋಕಸಭೆಯಿಂದ ಉಚ್ಛಾಟಿಸಿರುವುದನ್ನು ಪ್ರಶ್ನಿಸಿ ಮಹುವಾ ಮೊಯಿತ್ರಾ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ' ಎಂದು ಅವರ ವಕೀಲರು ಹೇಳಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ಅರ್ಜಿಯು ಒಂದು ವಾರದೊಳಗೆ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಮಹುವಾ ಅವರು ‘ಅನೈತಿಕವಾಗಿ ನಡೆದುಕೊಂಡಿದ್ದಾರೆ’ ಎಂಬ ಕಾರಣಕ್ಕೆ ಅವರನ್ನು ಉಚ್ಚಾಟಿಸಬೇಕು ಎಂಬ ಗೊತ್ತುವಳಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಂಡಿಸಿದರು. ಸದನವು ಇದನ್ನು ಧ್ವನಿ ಮತದ ಮೂಲಕ ಅಂಗೀಕರಿಸಿತು. ಬಳಿಕ ಡಿಸೆಂಬರ್ 8ರಂದು ಮಹುವಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸಲಾಯಿತು.
ಇತ್ತ ಮೊಯಿತ್ರಾಅಸ್ತಿತ್ವದಲ್ಲೇ ಇಲ್ಲದ ನೀತಿ ಸಂಹಿತೆಯೊಂದನ್ನು ಉಲ್ಲಂಘಿಸಿರುವುದಾಗಿ ಹೇಳಿ ತಮ್ಮನ್ನು ಉಚ್ಛಾಟಿಸಲಾಗಿದೆ. ತನ್ನ ಉಚ್ಚಾಟನೆಯ ವಿರುದ್ಧ ಹೋರಾಟವನ್ನು ಮುಂದುವರೆಸುವುದಾಗಿ ಅವರು ಹೇಳಿದರು.