ಬೆಂಗಳೂರು,ಏ 18(Daijiworld News/MSP): ರಾಜ್ಯ ರಾಜಕಾರಣದಲ್ಲಿ ಭಾರೀ ಕೂತೂಹಲ ಕೆರಳಿಸಿದ್ದ ಮಂಡ್ಯ ಸೇರಿದಂತೆ, 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಪ್ರಥಮ ಹಂತದ ಲೋಕಸಭಾ ಚುನಾವಣೆಗೆ ತೆರೆಬಿದ್ದಿದೆ. ಇದರ ಬೆನ್ನಲ್ಲೇ 14 ಲೋಕಸಭಾ ಕ್ಷೇತ್ರಗಳ 241 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.
ರಾಜ್ಯದಲ್ಲಿ ಗುರುವಾರ ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಲೋಕಸಭೆ ಚುನಾವಣೆ ಮತದಾನ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 7ಕ್ಕೆ ಶುರುವಾದ ಮತದಾನ ಆರಂಭದಲ್ಲಿ ಚುರುಗತಿಯಲ್ಲಿತ್ತು. ಮಧ್ಯಾಹ್ನದ ಹೊತ್ತಿಗೆ ಮಂದಗತಿಯಲ್ಲಿ ಸಾಗಿತು.
ಅನೇಕ ಕಡೆಗಳಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೆ ಮತದಾರರು ಸರದಿ ಸಾಲಿನಲ್ಲಿ ನಿಂತು ಹಕ್ಕು ಮತದಾನದ ಹಕ್ಕು ಚಲಾಯಿಸಿದರು. ಮೊದಲ ಬಾರಿ ಮತ ಚಲಾಯಿಸಲು ಬಂದಿದ್ದ ಯುವ ಮತದಾರರು ಸರದಿ ಸಾಲಿನಲ್ಲಿ ಉತ್ಸಾಹದಿಂದ ಮತ ಚಲಾಯಿಸುವುದನ್ನೇ ಕುತೂಹಲದಿಂದ ಎದುರು ನೊಡುತ್ತಿದ್ದರು. ಇನ್ನು ಮತ ಚಲಾಯಿಸಿ ಬಂದವರ ಮೊಗದಲ್ಲಂತೂ ಏನೋ ಸಾಧಿಸಿದ ಕಳೆ ಗೋಚರಿಸುತ್ತಿತ್ತು.ವಯೋವೃದ್ಧರು, ಅಂಗವಿಕಲರು ಸಹ ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದರು.
ಅಂಗವಿಕಲರು ಮತ್ತು ನಡೆಲಾರದಂತಹ ಸ್ಥಿತಿಯಲ್ಲಿರುವ ಮತದಾರರ ಅನುಕೂಲಕ್ಕಾಗಿ ಹಲವು ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು.