ಮೈಸೂರು,ಡಿ14(DaijiworldNews/RA):ಲೋಕಸಭಾ ಕಲಾಪದ ವೇಳೆ ದುಷ್ಕರ್ಮಿಗಳು ಸಂಸತ್ ನೊಳಕ್ಕೆ ನುಗ್ಗಿ ಕಲರ್ ಸ್ಪ್ರೇ ಹಾರಿಸಿ ದುಷ್ಕೃತ್ಯ ಎಸಗಲು ಮುಂದಾಗಿ ಕೋಲಾಹಲವೆಬ್ಬಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಕಛೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಕೃತ್ಯ ಎಸಗಿ ಬಂಧನಕ್ಕೊಳಗಾಗಿರುವ ಆರೋಪಿಗಳಿಬ್ಬರು ಸಂಸತ್ ನೊಳಗೆ ಪ್ರವೇಶಿಸಲು ಪ್ರತಾಪ್ ಸಿಂಹ ಅವರು ನೀಡಿದ್ದ ಪಾಸ್ ಗಳನ್ನು ಬಳಸಿಕೊಂಡಿದ್ದರು.ಆರೋಪಿಗಳಾದ ಸಾಗರ್ ಶರ್ಮ ಮತ್ತು ಮೈಸೂರಿನ ಮನೋರಂಜನ್ ಡಿ. ಸಂದರ್ಶಕರ ಗ್ಯಾಲರಿಯಲ್ಲಿ ಇದ್ದುಕೊಂಡು ಈ ಕೃತ್ಯ ಎಸಗಿದ್ದರು.
ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಾಪ್ ಸಿಂಹ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿ ಈ ಕೃತ್ಯಕ್ಕೆ ಪ್ರತಾಪ್ ಸಿಂಹರವರೇ ನೇರ ಹೊಣೆ ಎಂದು ಆರೋಪಿಸಿದರು.
ಈ ವೇಳೆ ತಳ್ಳಾಟ,ನೂಕಾಟ ಕೂಡ ನಡೆದಿದೆ.ಘಟನೆ ವಿರೋಧಿಸಿ ಇತ್ತ ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದಲೂ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆ ವೇಳೆ ಭಾರೀ ಸಂಖ್ಯೆಯ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.