ನದೆಹಲಿ,ಏ 18(Daijiworld News/AZM):ಈಸ್ಟರ್ಅನ್ನು ಕುಟುಂಬದವರ ಜತೆ ಆಚರಿಸಲು ಅವಕಾಶ ನೀಡುವಂತೆ ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ತಳ್ಳಿ ಹಾಕಿದೆ.
ಈಸ್ಟರ್ಗಾಗಿ ಏಳು ದಿನಗಳ ಮಧ್ಯಂತರ ಜಾಮೀನು ನೀಡುವಂತೆ ಮೈಕಲ್ ಕೋರಿದ್ದ. ಭಾರತದಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಅವುಗಳನ್ನು ಆಚರಿಸಲು ಆರೋಪಿ ವ್ಯಕ್ತಿಗಳಿಗೆ ಜೈಲಿನಿಂದ ಹೊರಗೆ ಹೋಗಲು ಅವಕಾಶ ನೀಡಲು ಸಾಧ್ಯವಾಗುವುದಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಮೈಕಲ್ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ತಮ್ಮ ವಶದಲ್ಲಿಯೇ ಮೈಕಲ್ ಈಸ್ಟರ್ ಹಬ್ಬದಲ್ಲಿ ಪಾಲ್ಗೊಳ್ಳಬಹುದು ಎಂದು ಸಂಸ್ಥೆಗಳು ಹೇಳಿದವು.
ಒಂದು ವೇಳೆ ಮೈಕಲ್ ಮಧ್ಯಂತರ ಜಾಮೀನು ಪಡೆದುಕೊಂಡು ಹೊರ ಹೋದರೆ ಮತ್ತು ಹೇಳಿಕೆಗಳನ್ನು ನೀಡಿದರೆ ಅದು ತನಿಖೆಯ ಹಳಿ ತಪ್ಪಿಸಬಹುದು ಎಂದು ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದವು.