ಲಖನೌ, ಡಿ 15 (DaijiworldNews/AA): ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ರಾಮ್ ದುಲಾರೆ ಗೋಂಡ್ ಗೆ 25 ವರ್ಷ ಜೈಲು ಶಿಕ್ಷೆ ವಿಧಿಸಿ ಉತ್ತರ ಪ್ರದೇಶದ ಸೋಭದ್ರಾ ಜಿಲ್ಲೆಯ ಜನಪ್ರತಿನಿಧಿಗಳ ನ್ಯಾಯಾಲಯವು ಆದೇಶ ಹೊರಡಿಸಿದೆ.
ದುದ್ಧಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಶಾಸಕನಾಗಿದ್ದ ಗೋಂಡ್ 9 ವರ್ಷದ ಬಾಲಕಿ ಮೇಲೆ ವರ್ಷದ ಹಿಂದೆ ಅತ್ಯಾಚಾರ ಎಸಗಿರುವ ಆರೋಪ ಸಾಬೀತಾದ ಹಿನ್ನೆಲೆ ಆತನನ್ನು ದೋಷಿ ಎಂದು ಡಿ. 12 ರಂದು ನ್ಯಾಯಾಲಯಕ್ಕೆ ಒಪ್ಪಿಸಲಾಯಿತು. ಆದರೆ ಇಂದು ಆರೋಪಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ವಿಚಾರಣೆಯ ವೇಳೆ ಸಂತ್ರಸ್ತೆ ಬಾಲಕಿಯಲ್ಲ ಎಂದು ಸಾಬೀತುಪಡಿಸಲು ನಕಲಿ ಶಾಲಾ ಪ್ರಮಾಣಪತ್ರ ಸೃಷ್ಟಿಸಿದ್ದ. ಹಾಗೂ ದೂರು ಹಿಂಪಡೆಯುವಂತೆ ಸಂತ್ರಸ್ತೆಯ ಕುಟುಂಬಕ್ಕೆ ಹಣದ ಆಮಿಷವೊಡ್ಡಿ, ಅವರ ಮೇಲೆ ಒತ್ತಡ ಹೇರಿದ ಆರೋಪಗಳು ಗೋಂಡ್ ನ ಮೇಲೆ ಇತ್ತು.
ಆರೋಪಿಗೆ ನ್ಯಾಯಾಲಯವು 25 ವರ್ಷ ಜೈಲು ಶಿಕ್ಷೆಯೊಂದಿಗೆ 10 ಲಕ್ಷ ದಂಡವನ್ನು ವಿಧಿಸಿದೆ. ಜೊತೆಗೆ ದಂಡದ ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆ ಸೂಚಿಸಲಾಗಿದೆ. ಇನ್ನು ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟಿಸುತ್ತಿದ್ದಂತೆ ಪೊಲೀಸರು ಗೋಂಡ್ ನನ್ನು ವಶಕ್ಕೆ ಪಡೆದಿದ್ದಾರೆ. ವಿಧಾನಸಭಾ ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ.