ಹಾಸನ, ಡಿ 17 (DaijiworldNews/AA): ಸಂಸತ್ ಮೇಲಿನ ಸ್ಮೋಕ್ ಬಾಂಬ್ ದಾಳಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಇದು ದೇಶದ ಭದ್ರತೆಯ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಸಂಸತ್ ನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ ಎಂದು ಕೇಂದ್ರ ವಿದ್ಯುತ್ ಮತ್ತು ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ತಿಳಿಸಿದ್ದಾರೆ.
ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈ ರೀತಿಯಾದ ಘಟನೆಗಳು ನಡೆಯುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಯಾರು? ಯಾವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ. ಇದು ರಾಜಕೀಯ ವಿಷಯವಾಗಬಾರದು. ಇನ್ನು ಈ ಘಟನೆಯ ಕುರಿತಂತೆ ನಿಷ್ಪಕ್ಷಪಾತ ತನಿಖೆ ನಡೆಸುತ್ತೇವೆ ಎಂದು ಲೋಕಸಭಾ ಸ್ಪೀಕರ್ ಜನರಿಗೆ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಸಂಸತ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತೇವೆ. ಭದ್ರತೆ ಹೆಚ್ಚಿಸುವುದರ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕಮಿಟಿ ರಚಿಸಿದ್ದಾರೆ. ಈ ಕಮಿಟಿಯು 15 ರಿಂದ 20 ದಿನಗಳೊಳಗೆ ವರದಿ ಸಲ್ಲಿಸುತ್ತದೆ. ಈ ವಿಷಯದಲ್ಲಿ ಇನ್ನೂ ಭದ್ರತೆ ಹೆಚ್ಚಾಗಬೇಕು ಎಂಬ ಉದ್ದೇಶ ನಮಗೆ ಇದೆ ಎಂದು ಸಚಿವರು ತಿಳಿಸಿದರು.