ನವದೆಹಲಿ, ಡಿ 18 (DaijiworldNews/MR): ಇಂದಿನಿಂದ ಮೂರು ದಿನ ಸಿಎಂ, ಡಿಸಿಎಂ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ, ಇಂದು ಸಂಜೆ 5 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ನಾಳೆ ಬೆಳಗ್ಗೆ 11 ಗಂಟೆಗೆ ಸಮಯಾವಕಾಶ ನಿಗದಿಯಾಗಿದೆ. ಜೊತೆಗೆ ಕೇಂದ್ರ ಸಚಿವರನ್ನೂ ಸಹ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ಮೂರು ದಿನಗಳ ದೆಹಲಿ ಪ್ರವಾಸದ ವೇಳೆ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ಮೋದಿ ಅವರನ್ನು ಭೇಟಿಯಾಗಲು ನಮಗೆ ಸಮಯ ಕೊಡ್ತಿಲ್ಲ ಎಂದು ಸಿಎಂ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೇ ಭೇಟಿಗೆ ಅವಕಾಶ ಕೊಡಿಸಿ ಎಂದು ಬಿಜೆಪಿ ನಾಯಕರನ್ನು ಕಿಚಾಯಿಸಿದ್ದರು. ಕೊನೆಗೂ ಪ್ರಧಾನಿ ಭೇಟಿಗೆ ಸಮಯ ಕೂಡಿ ಬಂದಿದೆ.
ಈ ಭೇಟಿಯಲ್ಲಿ ರಾಜ್ಯದಲ್ಲಿರುವ ಬರಗಾಲ ಸಮಸ್ಯೆ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇ ವೇಳೆ ಬರ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸುವ ಸಾಧ್ಯತೆ ಇದ್ದು, ರಾಜ್ಯದ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಸಚಿವರ ಜೊತೆ ಚರ್ಚೆ ನಡೆಸಬಹುದು ಎಂದು ಹೇಳಲಾಗಿದೆ.