ಬೆಂಗಳೂರು, ಡಿ 18 (DaijiworldNews/MR): ಬೆಂಗಳೂರಿನ ರಾಮಮೂರ್ತಿನಗರದ ಮನೆಯೊಂದರಲ್ಲಿ ಇತ್ತೀಚೆಗೆ ಜಪ್ತಿ ಮಾಡಿದ್ದ ₹ 21 ಕೋಟಿ ಮೌಲ್ಯದ ಡ್ರಗ್ಸ್ ಪ್ರಕರಣದಲ್ಲಿ ಸಿನಿ ತಾರೆಯರು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರದ ವ್ಯಕ್ತಿಗಳ ಹೆಸರು ಕೇಳಿಬಂದಿದೆ.
ಇನ್ನೇನು ಹೊಸ ವರ್ಷದ ಪಾರ್ಟಿಗಳು ಬೆಂಗಳೂರಿನಲ್ಲಿ ಭಾರೀ ಸದ್ದು ಮಾಡಲಿವೆ. ಪಾರ್ಟಿ ನೆಪದಲ್ಲಿ ಮಾದಕ ವಸ್ತುಗಳ ಬಳಕೆ, ಸಂಗ್ರಹದ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಸಾಮಾನ್ಯರಿಗಿಂತ ವಿಐಪಿ ಇಂತ ಮೋಜು ಮಸ್ತಿಯಲ್ಲಿ ಪಾಲ್ಗೊಳ್ಳುವುದರಿಂದ ಮಾದಕ ವಸ್ತುಗಳ ವಹಿವಾಟಿನ ಮೇಲೆ ನಿಗಾ ಇರಿಸಿದ್ದಾರೆ.
ಇತ್ತೀಚೆಗೆ ಜಪ್ತಿ ಮಾಡಿದ್ದ 21 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪ್ರಕರಣದಲ್ಲಿ ಹಲವಾರು ಚಲನಚಿತ್ರ ನಟ, ನಟಿಯರು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯ ವ್ಯಕ್ತಿಗಳ ಹೆಸರು ಕೇಳಿಬಂದಿದೆ. 2024ರ ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಸರಬರಾಜು ಮಾಡಲು ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿಡಲಾಗಿತ್ತು. ಈ ಮನೆಯ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ನೈಜೀರಿಯಾದ ಪ್ರಜೆ ಲಿಯೋನಾರ್ಡ್ (44) ಎಂಬಾತನನ್ನು ಬಂಧಿಸಿದ್ದರು.
ಪ್ರಮುಖ ಪೆಡ್ಲರ್ ಆಗಿದ್ದ ಲಿಯೋನಾರ್ಡ್, ನಗರದಲ್ಲಿರುವ ಉಪ ಪೆಡ್ಲರ್ಗಳ ಮೂಲಕ ಡ್ರಗ್ಸ್ ಮಾರಾಟ ಮಾರುತ್ತಿದ್ದ. ಕೆಲವು ಸಿನಿಮಾ ತಾರೆಯರು, ಉದ್ಯಮಿಗಳು, ವ್ಯಾಪಾರಿಗಳು, ಹಾಗೂ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಡ್ರಗ್ಸ್ ಖರೀದಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಅವರು ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ ಎಂದು ಪೋಲಿಸ್ ಮೂಲಗಳು ಹೇಳಿವೆ.
ಪ್ರಮುಖ ಆರೋಪಿ ಲಿಯೋನಾರ್ಡ್, ಯಾವ ಯಾವ ಮೂಲಗಳಿಂದ ಡ್ರಗ್ಸ್ ತರುತ್ತಿದ್ದ, ಈತನ ಗ್ರಾಹಕರು ಯಾರು ಎಷ್ಟು ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದ ಎಂಬ ವಿಷಯಗಳನ್ನು ಕುರಿತು ತನಿಖೆ ನಡೆಸಲಾಗುತ್ತಿದೆ.