ಬೀದರ್, ಡಿ 19 (DaijiworldNews/AA): ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ದೈಹಿಕ ಶಿಕ್ಷಕರೋರ್ವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ ಘಟನೆ ಬೀದರ್ ನ ಹುಮ್ನಾಬಾದ್ ಗ್ರಾಮದಲ್ಲಿ ನಡೆದಿದೆ.
ಹುಮ್ನಾಬಾದ್ ಖಾಸಗಿ ಶಾಲೆಯ ದೈಹಿಕ ಶಿಕ್ಷಕರಾದ ರಮೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿಗಳು ಗಲಾಟೆ ಮಾಡಿದ್ದಾರೆಂಬ ನೆಪವೊಡ್ಡಿ ಶಿಕ್ಷಕ ರಮೇಶ್ ಅವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಿ ಅವರ ವಿರುದ್ಧ ಹುಮ್ನಾಬಾದ್ ಠಾಣೆಯಲ್ಲಿ ವಿದ್ಯಾರ್ಥಿಗಳ ಪೋಷಕರು ದೂರು ದಾಖಲು ಮಾಡಿದ್ದರು. ಇದೀಗ ಪೋಷಕರ ದೂರಿನ ಮೇರೆಗೆ ಶಿಕ್ಷಕನನ್ನು ಬಂಧಿಸಲಾಗಿದೆ.
ಶಿಕ್ಷಕ ರಮೇಶ್ ಅವರು 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಡೆದಿದ್ದರು. ಮಕ್ಕಳು ಗಲಾಟೆ ಮಾಡುತ್ತಿದ್ದಾರೆಂದು ಅವರ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದರು. ಅಷ್ಟೇ ಅಲ್ಲದೆ ಯಾರಿಗಾದರು ಈ ವಿಷಯವನ್ನು ತಿಳಿಸಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದರು. ಆದರೆ ಮಕ್ಕಳಿಗೆ ಆದ ಗಾಯಗಳನ್ನು ಗಮನಿಸಿದ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ದು ಇದೀಗ ಶಿಕ್ಷಕನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.