ಗುಜರಾತ್,ಡಿ 19 (DaijiworldNews/MS): ಗಂಡನಾದರೂ ಸರಿ ಅತ್ಯಾಚಾರ ಅದು ಅತ್ಯಾಚಾರವೇ.. ಅಪರಾಧಿ ಮತ್ತು ಸಂತ್ರಸ್ತೆಯ ನಡುವಿನ ಸಂಬಂಧ ಇಲ್ಲಿ ಲೆಕ್ಕಿಸಲು ಸಾಧ್ಯವಿಲ್ಲ, ಯಾಕೆಂದರೆ ಅತ್ಯಾಚಾರವು ಎಂದೆಂದಿಗೂ "ಘೋರ ಅಪರಾಧ" ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ.
ಲೈಂಗಿಕ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಮಹಿಳೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸುವಾಗ ಗುಜರಾತ್ ಹೈಕೋರ್ಟ್ ಈ ತೀರ್ಪು ನೀಡಿದೆ.
ಪ್ರಕರಣದ ವಿವರ:
ಮಹಿಳೆಯೊಬ್ಬರು ತನ್ನ ಪತಿ, ಮಾವ ಮತ್ತು ಅತ್ತೆಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಈ ಹಿನ್ನಲೆಯಲ್ಲಿ ಗುಜರಾತ್ ಪೊಲೀಸರು ಮೂವರನ್ನೂ ಬಂಧಿಸಿದ್ದರು. ಇವರ ವಿರುದ್ದ ಕ್ರೌರ್ಯ, ಅತ್ಯಾಚಾರ, ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿತ್ತು.
ಮಹಿಳೆಯ ಅತ್ತೆಯೂ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ವೇಳೆ ನ್ಯಾಯಮೂರ್ತಿಯೂ ಡಿಎ ಜೋಶಿ ಒಬ್ಬ ಮನುಷ್ಯ ಮನುಷ್ಯನೇ ; ಕೃತ್ಯ ಕೃತ್ಯವೇ; ಅತ್ಯಾಚಾರವು ಅತ್ಯಾಚಾರವೇ ಆಗಿದೆ. ಸಂತ್ರಸ್ತೆ ಅಗ್ನಿಪರೀಕ್ಷೆಗಿಂತಲೂ ಹೆಚ್ಚು ಪರೀಕ್ಷೆಗೊಳಗಾಗಿದ್ದು, ಇದು ವೈವಾಹಿಕ ಅತ್ಯಾಚಾರವನ್ನು ಮೀರಿದೆ, ಪತಿ ಬಲವಂತದ ಲೈಂಗಿಕ ಕ್ರಿಯೆ ನಡೆಸಿ ಅದನ್ನು ರೆಕಾರ್ಡ್ ಮಾಡಿ ಹಣದ ಗಳಿಸುವ ದುರುದ್ದೇಶದಿಂದ ಅಶ್ಲೀಲ ಸೈಟ್ಗಳಲ್ಲಿ ಮಾರಾಟ ಮಾಡಿದ್ದಾನೆ ಇದಕ್ಕೆ ಕುಟುಂಬದ ಸದಸ್ಯರು ಕುಮ್ಮಕ್ಕು ನೀಡಿದ್ದಾರೆ. ಆಕೆಯ ಬೆಡ್ ರೂಂ ನಲ್ಲಿ CCTV ಹಾಗೂ ಪರಿ ತನ್ನ ಮೊಬೈಲ್ ಮೂಲಕ ರೆಕಾರ್ಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, "ಇಂತಹ ಹೇಯ ಮತ್ತು ನಾಚಿಕೆಗೇಡಿನ ಕೃತ್ಯದ ಹಿಂದೆ ಯಾವುದೇ ಕಾರಣವಿರಲಿ, ಅದನ್ನು ಕಟ್ಟುನಿಟ್ಟಾಗಿ ಟೀಕಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅಪರಾಧಗಳು ನಡೆಯದಂತೆ ಆರೋಪಿಗಳಿಗೆ ಶಿಕ್ಷೆಯಾಗಬೇಕು" ಎಂದು ನ್ಯಾಯಧೀಶರು ಅಭಿಪ್ರಾಯಪಟ್ಟರು.
ಅಮೆರಿಕಾದ ಐವತ್ತು ರಾಜ್ಯಗಳು, ಆಸ್ಟ್ರೇಲಿಯಾದ ಮೂರು ರಾಜ್ಯಗಳು, ನ್ಯೂಜಿಲೆಂಡ್, ಕೆನಡಾ, ಇಸ್ರೇಲ್, ಫ್ರಾನ್ಸ್, ಸ್ವೀಡನ್, ಡೆನ್ಮಾರ್ಕ್, ನಾರ್ವೆ, ಸೋವಿಯತ್ ಒಕ್ಕೂಟ, ಪೋಲೆಂಡ್ ಮತ್ತು ಜೆಕೊಸ್ಲೊವಾಕಿಯಾ ಮತ್ತಿತರ ಹಲವು ದೇಶಗಳಲ್ಲಿ ವೈವಾಹಿಕ ಅತ್ಯಾಚಾರ ಅಪರಾಧವಾಗಿದೆ. ಮಹಿಳೆಯ ಮೇಲೆ ಸ್ವಂತ ಪತಿಯೇ ಅತ್ಯಾಚಾರ ಮಾಡಿದರೂ ಅದು ಅತ್ಯಾಚಾರವೇ ಆಗಿದೆ ಎಂದು ಅದೇಶದಲ್ಲಿ ತಿಳಿಸಿದ್ದಾರೆ.