ಬೆಂಗಳೂರು, ಎ19(Daijiworld News/SS): ಭಯೋತ್ಪಾದನೆ ಮತ್ತು ಧರ್ಮದ ವಿಚಾರ ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚುನಾವಣಾ ಪ್ರಚಾರದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಒಂದು ನಾಟಕ ನಡೆಯುತ್ತಿದೆ. ಅದರಲ್ಲಿ ಭಾವನೆ, ದ್ವೇಷವಿದೆ. ಭಾವನೆ ಹೆಚ್ಚಾದಾಗ ಮುಖ್ಯಮಂತ್ರಿಗಳು ಕಣ್ಣೀರು ಹಾಕುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಟೀಕೆ ಮಾಡಿದ್ದರು.
ಪ್ರಧಾನಿ ಮೋದಿಯವರ ಈ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಭಯೋತ್ಪಾದನೆ ಮತ್ತು ಧರ್ಮದ ವಿಚಾರ ಮುಂದಿಟ್ಟುಕೊಂಡು ಅವರು ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮಾತ್ರವಲ್ಲ, ಮೋದಿಯವರಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಂಬಿಕೆ ಇದ್ದರೆ ಪ್ರಚಾರಕ್ಕೆ ನಿಮಗೆ ಸಿನಿಮಾ, ಟಿವಿ ಚಾನೆಲ್ ಏಕೆ ಬೇಕು. ಪ್ರಧಾನಿಗಳೇ ನೀವು ಉತ್ತಮ ಆಡಳಿತವನ್ನು ನೀಡಿದ್ದರೆ. ನಿರುದ್ಯೋಗ ಸಮಸ್ಯೆ 45 ವರ್ಷಗಳಲ್ಲೇ ಏಕೆ ಅಧಿಕವಾಗಿದೆ...? ನೀವು ಹೇಳಿದಂತೆ ಕಪ್ಪು ಹಣ ವಾಪಸ್ ತಂದಿರಾ..? ಎಂದು ಪ್ರಶ್ನಿಸಿದ್ದಾರೆ.