ನವದೆಹಲಿ, ಡಿ 20 (DaijiworldNews/MS): ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಪ್ರಕರಣದ ತನಿಖೆಯಲ್ಲಿ ನಿರ್ಣಾಯಕ ಪ್ರಗತಿ ಸಾಧಿಸಿದ್ದು, ವಿಡಿಯೋ ಅಪ್ಲೋಡ್ ಮಾಡಿದ ಶಂಕಿತ ನಾಲ್ವರನ್ನು ಪತ್ತೆಹಚ್ಚಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಆದರೆ ಡೀಪ್ ಫೇಕ್ ವಿಡಿಯೋ ಸೃಷ್ಟಿಸಿದ ಮತ್ತು ಅದರ ಹಿಂದಿನ ಪ್ರಮುಖ ಸಂಚುಕೋರರ ಹುಡುಕಾಟ ಇನ್ನೂ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಫೇಸ್ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ನ ಮಾತೃಸಂಸ್ಥೆ ಮೆಟಾ ನೀಡಿದ ಮಾಹಿತಿಯ ಆಧಾರದ ಮೇಲೆ ವೀಡಿಯೊ ಅಪ್ಲೋಡ್ ಮಾಡಿದ ವ್ಯಕ್ತಿಗಳು ಪತ್ತೆಯಾಗಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಕೋಶದ ಸೈಬರ್ ಸೆಲ್ ಈ ಹಿಂದೆ ಮಾಹಿತಿ ಕೋರಿ ಮೆಟಾಗೆ ನೋಟಿಸ್ ಕಳುಹಿಸಿತ್ತು.
ಈಗಾಗಲೇ ಅಪ್ ಲೋಡ್ ಮಾಡಿದ ನಾಲ್ವರನ್ನು ಬಂಧಿಸಲಾಗಿದ್ದು, ಆದರೆ ಪ್ರಕರಣದ ಪ್ರಮುಖ ಸಂಚುಕೋರ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿಗಳು ತಮ್ಮ ಖಾತೆಗಳಿಂದ ಮಾಹಿತಿಯನ್ನು ಅಳಿಸಿದ್ದರಿಂದ ತನಿಖೆಗೆ ಅಡಚಣೆಯುಂಟಾಗಿತ್ತು.
ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಡಿಜಿಟಲ್ ಸುರಕ್ಷತೆಯ ಚರ್ಚೆಗಳನ್ನು ಹುಟ್ಟುಹಾಕಿದ್ದು, ಜಾರಾ ಪಟೇಲ್ ಎಂದು ಗುರುತಿಸಲಾದ ಮಹಿಳೆಯೊಬ್ಬರು ಲಿಫ್ಟ್ನಿಂದ ಹೊರಬರುವ ವಿಡಿಯೋವನ್ನು ಮಂದಣ್ಣನನ್ನು ಹೋಲುವಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಿ ಮುಖವನ್ನು ಎಡಿಟ್ ಮಾಡಲಾಗಿತ್ತು. ಇದು ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ಘಟನೆಯ ಒಂದು ತಿಂಗಳ ಬಳಿಕ ಈ ಬೆಳವಣಿಗೆಗಳು ನಡೆದಿವೆ.
ಡೀಪ್ಫೇಕ್ ವೀಡಿಯೊಗಳನ್ನು ನಕಲಿ ಗುರುತನ್ನು ಬಳಸಿಕೊಂಡು ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಬಳಕೆ ಮಾಡಿ ಅಪ್ ಲೋಡ್ ಮಾಡಿದ್ದಾರೆ. ಈ ಶಂಕಿತರು ಡೀಪ್ಫೇಕ್ ವಿಡಿಯೊವನ್ನು ಸೃಷ್ಟಿಸಿಲ್ಲ. ಕೇವಲ ಅಪ್ಲೋಡ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.