ಬೆಂಗಳೂರು,ಡಿ 21 (DaijiworldNews/MS): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ.ಎಂ.ಬಸವರಾಜು ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾಗಿ ಈ ಹಿಂದೆ ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜು ವಿರುದ್ಧ ಜಿಲ್ಲಾ ಕಚೇರಿ ಸಿಬ್ಬಂದಿಗಳಿಗೆ ಹಾಗೂ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಕಿರುಕುಳ, ಮಾನಸಿಕ ಹಿಂಸೆ, ಮಹಿಳಾ ಸಿಬ್ಬಂದಿಗಳ ಜೊತೆ ದುರ್ನಡತೆ, ದಬ್ಬಾಳಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿಬಂದಿದ್ದು, ಸಾರ್ವಜನಿಕರ ಮುಂದೆ ಸಿಬ್ಬಂದಿಗಳನ್ನು ಅವಮಾನಿಸುತ್ತಿದ್ದರು ಎನ್ನುವ ಆರೋಪಗಳಿವೆ.
ಅಲ್ಲದೇ ಕಚೇರಿ ಸಮಯ ಮುಗಿದ ನಂತರವೂ ಅವಶ್ಯಕತೆ ಇಲ್ಲದಿದ್ದರೂ ಮಹಿಳಾ ಸಿಬ್ಬಂದಿಗಳನ್ನು ರಾತ್ರಿ 8-9 ಗಂಟೆವರೆಗೆ ಕಚೇರಿಯಲ್ಲಿ ಉಳಿಯುವಂತೆ ಆದೇಶಿಸಿದ್ದರು. ಮನೆಗೆ ಹೋದ ಬಳಿಕವೂ ಸಿಬ್ಬಂದಿಗಳಿಗೆ ರಾತ್ರಿ 10-11 ಗಂಟೆಗೆ ಕರೆ ಮಾಡಿ ಕೆಲಸ ಹೇಳುತ್ತಿದ್ದರು. ಇಲಾಖೆಯ ಕಾರ್ಯಕ್ರಮ ನಡೆಯುತ್ತಿದ್ದಾಗ ಬೇರೆ ಇಲಾಖೆ ಅಧಿಕಾರಿಗಳ ಎದುರಿಗೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳನ್ನು ಕೆಟ್ಟ ಶಬ್ದಗಳಿಂದ ಬೈದು ಅವಮಾನಿಸುತ್ತಿದ್ದರು.
ಸಿಬ್ಬಂದಿಗಳಿಗೆ ಯೋಗ್ಯತೆ ಇಲ್ಲ ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಕಾಲಕಾಲಕ್ಕೆ ಕಡತಗಳನ್ನು ಸಿಬ್ಬದಿಗಳು ತಯಾರಿಸಿಕೊಟ್ಟರೂ ಮೇಲಧಿಕಾರಿಗಳ ಬಳಿ ಹೋಗಿ ಕಡತಕ್ಕೆ ಸಹಿ ಹಾಕಿಸಿಕೊಂಡು ಬರದೇ ಕೆಲಸದಲ್ಲಿ ವಿಳಂಬ ಧೋರಣೆ ಅನುಸರಿಸುತ್ತ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಗಳು ಬಸವರಾಜು ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು.