ಉತ್ತರ ಪ್ರದೇಶ, ಡಿ 21 (DaijiworldNews/AA): ಯಶಸ್ಸಿಗೆ ವಯಸ್ಸಿನ ಮಿತಿಯಿಲ್ಲ, ಸಾಧಿಸುವ ಅಚಲ ಮನಸ್ಸೊಂದಿದ್ದರೆ ಸಾಕು. ಇದಕ್ಕೆ ಆದರ್ಶ್ ಕಾಂತ್ ಶುಕ್ಲಾ ಅವರ ಸಾಧನೆಯೇ ಉತ್ತಮ ನಿದರ್ಶನ. ವಯಸ್ಸು ಚಿಕ್ಕದಾದರೂ ಇವರ ಸಾಧನೆ ದೊಡ್ಡದು. 21ನೇ ವಯಸ್ಸಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆದರ್ಶ್, ಐಪಿಎಸ್ ಅಧಿಕಾರಿಯಾಗಿದ್ದಾರೆ.
ಮೂಲತಃ ಉತ್ತರ ಪ್ರದೇಶದ ಬಾರಾಬಂಕಿ ನಿವಾಸಿಯಾಗಿರುವ ಆದರ್ಶ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ 149 ನೇ ಅಖಿಲ ಭಾರತ ರ್ಯಾಂಕ್ ಗಳಿಸಿದ್ದಾರೆ. ಜೊತೆಗೆ ಇವರು ಭಾರತದ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಆದರ್ಶ್ ಅವರು ಸಾಮಾನ್ಯ ಕುಟುಂಬದಿಂದ ಬಂದವರಾಗಿದ್ದು, ಅವರ ತಂದೆ ರಾಧಾ ಕಾಂತ್ ಶುಕ್ಲಾ ಅವರು ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಆದರ್ಶ್ ಅವರ ಪೋಷಕರಿಗೆ ಎಷ್ಟೇ ಆರ್ಥಿಕ ಸಮಸ್ಯೆಗಳಿದ್ದರೂ ಮಗನ ಆಕಾಂಕ್ಷೆಗಳನ್ನು ಪೂರೈಸುತ್ತಾ ಅವನಿಗೆ ಶೈಕ್ಷಣಿಕ ಬೆಂಬಲವನ್ನು ನೀಡಿದರು. ತಂದೆ ತಾಯಿಯ ನಿರೀಕ್ಷೆಯನ್ನು ಹುಸಿಯಾಗಿಸದೆ ಆದರ್ಶ್ ಲಕ್ನೋದ ನ್ಯಾಷನಲ್ ಪಿಜಿ ಕಾಲೇಜಿನಲ್ಲಿ ಬಿಎಸ್ ಸಿ ಓದುತ್ತಿರುವಾಗ ಜೀವಶಾಸ್ತ್ರದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಾರೆ.
ಆದರ್ಶ್ ಅವರ ತಂದೆಗೆ ಐಪಿಎಸ್ ಅಧಿಕಾರಿಯಾಗುವ ಕನಸಿತ್ತು. ಆದರೆ ಅದು ನನಸಾಗಲಿಲ್ಲ. ತಂದೆಯಂತೆಯೇ ಆದರ್ಶ್ ಅವರಿಗೂ ಐಪಿಎಸ್ ಅಧಿಕಾರಿಯಾಗುವ ಕನಸಿತ್ತು. ತಂದೆಯ ಆಕಾಂಕ್ಷೆಗಳಿಂದ ಸ್ಫೂರ್ತಿ ಪಡೆದ ಆದರ್ಶ್ ತನ್ನ ಡಿಪ್ಲೊಮಾ ಮುಗಿಸಿದ ಬಳಿಕ ಯುಪಿಎಸ್ ಸಿ ಪರೀಕ್ಷೆ ಬರೆಯಲು ತಯಾರಿ ನಡೆಸಲಿ ಪಾರಂಭಿಸುತ್ತಾರೆ.
2020 ರಲ್ಲಿ, ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆಯನ್ನು ಬರೆದ ಆದರ್ಶ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 149 ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುತ್ತಾರೆ. ಆದರ್ಶ್ ತಮ್ಮ ಕನಸನ್ನು ನನಸಾಗಿಸಿಕೊಳ್ಳುವುದು ಮಾತ್ರವಲ್ಲದೇ, ಯುಪಿಎಸ್ ಸಿ ಪರೀಕ್ಷೆ ಬರೆಯಬೇಕೆಂಬ ಇತರೆ ಆಕಾಂಕ್ಷಿಗಳಿಗೆ ಸಲಹೆ ಹಾಗೂ ಸ್ಫೂರ್ತಿ ನೀಡುತ್ತಾರೆ. ಜೊತೆಗೆ ದೇಶದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿ ಯನ್ನು ಎದುರಿಸುವುದು ಹೇಗೆ ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತಾರೆ. ಈ ಮೂಲಕ ಇತರರ ಕನಸನ್ನು ನನಸಾಗಿಸಿಕೊಳ್ಳಲು ಸಹಾಯ ಮಾಡುತ್ತಿರುವ ಆದರ್ಶ್ ಅವರಿಗೆ ನಮ್ಮದೊಂದು ಸಲಾಂ.