ನವದೆಹಲಿ, ಡಿ.22 ( DaijiworlsNews/AK): ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 146 ಸದಸ್ಯರ ಅಮಾನತುಗೊಳಿಸಿದನ್ನು ಖಂಡಿಸಿ ಇಂದು ದೇಶಾದ್ಯಂತ ವಿರೋಧ ಪಕ್ಷಗಳ INDIA ಮೈತ್ರಿಕೂಟದ ನಾಯಕರು ಪ್ರತಿಭಟನೆ ಮುಂದಾಗಿದ್ದಾರೆ. ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಪ್ರಾರಂಭವಾಗಿದ್ದು, ಈ ಪ್ರತಿಭಟನೆಯನ್ನು ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ನಡೆಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸಿವೆ.
ಡಿ. 13ರಂದು ನಡೆದಿದ್ದ ಸಂಸತ್ ಭದ್ರತಾ ವೈಫಲ್ಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ, ಘೋಷಣೆಗಳನ್ನು ಕೂಗುವ ಮೂಲಕ ಲೋಕಸಭಾ ಹಾಗೂ ರಾಜ್ಯಸಭಾ ಕಾರ್ಯಕಲಾಪಗಳನ್ನು ಅಡ್ಡಿಪಡಿಸಿದ್ದಕ್ಕಾಗಿ ಡಿ. 14ರಿಂದ ವಿರೋಧ ಪಕ್ಷಗಳ ಸಂಸದರನ್ನು ಅಮಾನತುಗೊಳಿಸಲಾಗಿದೆ.
ಜೈರಾಮ್ ರಮೇಶ್, ಎ.ರಾಜಾ, ಗೌರವ್ ಗೊಗೊಯಿ, ಮುಕುಲ್ ವಾಸ್ನಿಕ್ ಹಾಗೂ ನಾಸೀರ್ ಹುಸೈನ್ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ವಿರೋಧ ಪಕ್ಷಗಳ ಸಂಸದರು ಜಂತರ್ ಮಂತರ್ ಎದುರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಕಾಂಗ್ರೆಸ್ ನಾಯಕ ಅರವಿಂದರ್ ಸಿಂಗ್ ಲವ್ಲಿ ಪ್ರತಿಕ್ರಿಯಿಸಿ, ಸಂಸತ್ತಿನಿಂದ ಸಂಸದರನ್ನು ಅಮಾನತುಗೊಳಿಸಿರುವುದು ಭಾರತದ ಪ್ರಜಾಪ್ರಭುತ್ವದ ಪಾಲಿಗೆ ಕಳಂಕವಾಗಿದೆ ಎಂದು ಕಿಡಿ ಕಾರಿದರು ಆಕ್ರೋಶ ಹೊರಹಾಕಿದ್ದರೆ.
ಸಂಸತ್ತಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 146 ವಿರೋಧ ಪಕ್ಷಗಳ ಸಂಸದರನ್ನು ಅಮಾನತುಗೊಳಿಸಿ, ಮೂರು ಅಪರಾಧ ಕಾನೂನು ಮಸೂದೆಗಳಿಗೆ ಅಂಗೀಕಾರ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ. ಅವರು ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲ ಹಾಗೂ ಇದು ದೇಶದ ಹಿತಾಸಕ್ತಿಯ ಪರವಾಗಿಲ್ಲ ಎಂದು ಕಿಡಿಕಾರಿದರು.