ಶಿರಸಿ, ಡಿ 24(DaijiworldNews/SK): ರಾಜ್ಯದಲ್ಲಿ ಹಿಜಾಬ್ ಹಿಂದೆ ತಿರುಗುವ ಕಾಂಗ್ರೆಸ್ ಸರ್ಕಾರವಿದ್ದು, ಇದು ಕೇವಲ ಓಲೈಕೆ ರಾಜಕಾರಣ ನಡೆಸುತ್ತಿದೆ. ಈ ಸರ್ಕಾರ ಅಲ್ಪಸಂಖ್ಯಾತ ಮತ ಇಲ್ಲದೆ ಬದುಕುವುದಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದಿನಿಂದಲೂ ಕಾಂಗ್ರೆಸ್ ಸರ್ಕಾರ ಬಹುಸಂಖ್ಯಾತರ ಪರ ರಾಜಕಾರಣ ಮಾಡಿಲ್ಲ. ಇಂತಹ ಸರ್ಕಾರದ ಮುಖ್ಯಮಂತ್ರಿಗೆ ತಾಕತ್ತಿದ್ದರೆ ಭಾರತವು ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ. ರಾಮ ಮಂದಿರ ನಿರ್ಮಾಣವು ಭಾರತ ಹಿಂದೂ ರಾಷ್ಟ್ರವಾಗಿ ನಿರ್ಮಾಣವಾಗುವ ಮೊದಲ ಹೆಜ್ಜೆಯಾಗಿದೆ ಎಂದರು.
ಇನ್ನು ರಾಜ್ಯದ ಜನರ ಊಟ, ಬಟ್ಟೆಯ ಆಯ್ಕೆಗೆ ನಾನು ಯಾವುದೇ ರೀತಿಯಲ್ಲೂ ಅಡ್ಡಿಪಡಿಸೋದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಭವಿಷ್ಯದಲ್ಲಿ ಹಲವು ಸಮಸ್ಯೆಗೆ ಎಡೆ ಮಾಡಲಿದೆ. ಸಾಮಾಜಿಕ ಚೌಕಟ್ಟಿನ ಕಲ್ಪನೆಯೇ ಇಲ್ಲದ ಸರ್ಕಾರ, ಸಮವಸ್ತ್ರ ಕಲ್ಪನೆ ಬಿಟ್ಟು ಬೇಕಾಬಿಟ್ಟಿ ಹೇಳಿಕೆ ನೀಡುವುದು ಸರಿಯಲ್ಲ. ಇಂತಹ ಹಿಂದೂ ವಿರೋಧಿ ಸರ್ಕಾರ ಕರ್ನಾಟಕದಲ್ಲಿ ಬಹಳ ದಿನ ಉಳಿಯಲು ಸಾಧ್ಯವಿಲ್ಲ ಎಂದರು.