ಹುಬ್ಬಳ್ಳಿ, ಎ20(Daijiworld News/SS): ಪ್ರಧಾನಿ ಮೋದಿಯವರ 5 ವರ್ಷಗಳ ಅವಧಿಯ ಆಡಳಿತಕ್ಕಿಂತ ದೇವೇಗೌಡರ ಆಡಳಿತ ಹೆಚ್ಚು ಉತ್ತಮವಾಗಿತ್ತು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಆಂತರಿಕ ಭದ್ರತೆ ವಿಚಾರದಲ್ಲಿ ತಮ್ಮ ತಂದೆ ಹೆಚ್ ಡಿ ದೇವೇಗೌಡರ 10 ತಿಂಗಳ ಆಡಳಿತ ಮೋದಿಗಿಂತ ಒಳ್ಳೆದಿತ್ತು. ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ದೇಶ ಶಾಂತಿಯುತವಾಗಿತ್ತು. ಅವರ ಅವಧಿಯಲ್ಲಿ ಒಂದೇ ಒಂದು ದಾಳಿ ಕೂಡ ಆಗಿರಲಿಲ್ಲ ಎಂದು ಹೇಳಿದರು.
ದೇವೇಗೌಡರು ಪ್ರಧಾನಿಯಾಗಿದ್ದ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯಾವುದೇ ಕಲಹ ನಡೆದಿರಲಿಲ್ಲ. ಜಮ್ಮು-ಕಾಶ್ಮೀರದಲ್ಲಿ ಕೂಡ ಒಂದೇ ಒಂದು ಸ್ಫೋಟವಾಗಿರಲಿಲ್ಲ. ದೇಶದ ಒಳಗೆ ಬೇರೆ ಕಡೆಗಳಲ್ಲಿ ಸಹ ಯಾವುದೇ ಬಾಂಬ್ ದಾಳಿಯಾಗಿರಲಿಲ್ಲ ಎಂದು ನುಡಿದರು.
ದೇವೇಗೌಡರು 10 ತಿಂಗಳು ಪ್ರಧಾನ ಮಂತ್ರಿಗಳಾಗಿದ್ದಾಗ ಮತ್ತು ಮೋದಿಯವರು 5 ವರ್ಷ ಪ್ರಧಾನಿಯಾದಾಗ ಏನೇನು ಮಾಡಿದ್ದರು ಎಂದು ನೀವು ದಾಖಲೆಗಳನ್ನು ನೋಡಬಹುದು. ತಮ್ಮ ತಂದೆಯವರ 10 ತಿಂಗಳ ಅಧಿಕಾರಾವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿತ್ತು. ನನ್ನ ತಂದೆ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಯಾವುದಾದರೂ ಭಯೋತ್ಪಾದಕ ಕೃತ್ಯ ನಡೆದಿವೆಯೇ..? ಅವರು ಪ್ರಧಾನಿಯಾಗಿದ್ದಾಗ ಇಡೀ ದೇಶ ಶಾಂತವಾಗಿತ್ತು ಎಂದು ತಿಳಿಸಿದ್ದಾರೆ.