ಬೆಂಗಳೂರು, ಡಿ 26 (DaijiworldNews/MS): "ಐದು ಬೆರಳು ಸೇರಿ ಒಂದು ಮುಷ್ಟಿಯಾಯಿತು,ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು,ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯಿತು,ಐದು ಗ್ಯಾರಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆಯ ಎಸೆದು ಹೋದಳುಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತುಕರ್ನಾಟಕ ಸಮೃದ್ಧವಾಯಿತುಕರ್ನಾಟಕ ಪ್ರಬುದ್ಧವಾಯಿತು".
ಐದು ಗ್ಯಾರಂಟಿ ಯೋಜನೆಗಳ ಸಂಪೂರ್ಣ ಅನುಷ್ಠಾನ ಮತ್ತು ಅದನ್ನು ನೋಡಿ ವಿರೋಧ ಪಕ್ಷಗಳ ಪರಿಸ್ಥಿತಿ, ಸಂಕಟವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕವನದ ಮೂಲಕ ಛೇಡಿಸಿದ್ದು ಹೀಗೆ..
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ಕಾಂಗ್ರೆಸ್ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿವಕುಮಾರ್ ಅವರು ಈ ಕವನ ವಾಚಿಸಿದಾಗ ಸಭಿಕರು ನಗೆಗಡಲಲ್ಲಿ ತೇಲಿದರು.
ಕಾರ್ಯಕ್ರಮದ ನಂತರ ಮಾಧ್ಯಮದವರು ಕೇಳಿ ಮತ್ತೊಮ್ಮೆ ಡಿಸಿಎಂ ಅವರಿಂದ ಈ ಮೇಲಿನ ಕವನ ವಾಚಿಸಿದರು.
ಉಳಿದಂತೆ ಯುವನಿಧಿ ಯೋಜನೆ ನೋಂದಣಿಗೆ ಚಾಲನೆ ಕಾರ್ಯಕ್ರಮದಲ್ಲಿ ಡಿಸಿಎಂ ,“ಈ ಕಾಲದ ಯುವಕರು ಅದೃಷ್ಟವಂತರು. ನಾವು ಯುವಕರಾಗಿದ್ದ ಸಂದರ್ಭದಲ್ಲಿ ನಮಗೆ ಇಂತಹ ಯೋಜನೆಗಳು ಹಾಗೂ ಅವಕಾಶಗಳು ಸಿಕ್ಕಿರಲಿಲ್ಲ. ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ ದಿನ ಒಂದು ಮಾತು ಹೇಳಿದ್ದೆ. ನಮ್ಮ ಸರ್ಕಾರ ಮುಂದೆ ಅಧಿಕಾರಕ್ಕೆ ಬರಬೇಕಾದರೆ ಯುವಕರು ಹಾಗೂ ಮಹಿಳೆಯರ ಮೇಲೆ ವಿಶ್ವಾಸ ಇಡಬೇಕು ಎಂದು ಹೇಳಿದ್ದೆ. ಮಹಿಳೆಯರು, ಕೃಷಿಕ, ಕಾರ್ಮಿಕ, ಯುವಕ ಎಲ್ಲರೂ ಸೇರಿ ನಮಗೆ ಶಕ್ತಿ ತುಂಬಲಿದ್ದಾರೆ ಎಂದು ಹೇಳಿದ್ದೆ.
ಈ ದಿನ ನನಗೆ ಬಹಳ ಸಂತೋಷ ತಂದಿದೆ. ಕಾರಣ, ನಾವು ಕೊಟ್ಟ ಮಾತಿನಂತೆ ನಡೆಯುತ್ತಿರುವ ದಿನ. ಬಿಜೆಪಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ನಿಮ್ಮ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಆದರೆ ಅವರು ಅದನ್ನು ಮಾಡಲಿಲ್ಲ. ಹೀಗಾಗಿ ನಿಮ್ಮ ಕುಟುಂಬ ಹಾಗೂ ಬದುಕಿನಲ್ಲಿ ಬದಲಾವಣೆ ತರಲು, ನಿಮಗೆ ಶಕ್ತಿ ತುಂಬಲು ಈ ಯೋಜನೆ ಜಾರಿ ಮಾಡುತ್ತಿದ್ದೇವೆ.
ಇದು ಸರ್ಕಾರದ ಕಾರ್ಯಕ್ರಮವಲ್ಲ, ಇದು ನಿಮ್ಮ ಕಾರ್ಯಕ್ರಮ. ನೀವು ಕೊಟ್ಟ ಅಧಿಕಾರದಿಂದ ಪ್ರತಿಯಾಗಿ ನಾವು ನಿಮಗೆ ವಾಪಸ್ ನೀಡುತ್ತಿರುವ ಶಕ್ತಿ. ನೀವು ನಿಮ್ಮ ಜೀವನದಲ್ಲಿ ನಾಲ್ಕು "ಡಿ" ಗಳನ್ನು ಅಳವಡಿಸಿಕೊಳ್ಳಬೇಕು. ನೀವು ಕನಸು ಕಾಣಬೇಕು (Dream), ಕನಸು ಸಾಕಾರಗೊಳಿಸಲು ಆಸೆ, ಗುರಿ (Desire) ಪಡಬೇಕು. ಆ ಕನಸು ಸಾಕಾರಕ್ಕೆ ಬದ್ಧತೆ (Dedicate) ಇರಬೇಕು. ಶಿಸ್ತು (Discipline) ಹೊಂದಿರಬೇಕು. ಆಗ ನೀವು ನಿಮ್ಮ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ.
ನೀವು ನಿಮ್ಮ ಮೂಲವನ್ನು ಮರೆಯುವಂತಿಲ್ಲ. ನಿಮಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದವರು, ಕಷ್ಟಕಾಲದಲ್ಲಿ ನಿಮ್ಮ ಮನೆಯ ಜ್ಯೋತಿ ಬೆಳಗಿಸಿದವರು, ಯಾರು ನಿಮಗೆ ಅನ್ನ ನೀಡುತ್ತಾರೆ, ಯಾರು ನಿಮಗೆ ವಿದ್ಯೆಯ ಬೆಳಕು ನೀಡುತ್ತಾರೆ, ಅವರನ್ನು ಮರೆಯಬಾರದು. ಉಪಕಾರಸ್ಮರಣೆ ಬದುಕಿನಲ್ಲಿ ಶ್ರೇಷ್ಠ ಗುಣ.
ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಅದರಂತೆ ಈ ಐದು ಗ್ಯಾರಂಟಿ ಯೋಜನೆಗಳು ನಮ್ಮ ರಾಜ್ಯದ ಬಡವರು, ಯುವಕರು, ರೈತರು, ಮಹಿಳೆಯರ ಬದುಕಿನಲ್ಲಿ ಬದಲಾವಣೆ ಮಾಡಿದೆ. ನಿಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ.
ನೀವು 2023ರ ಚುನಾವಣೆಯಲ್ಲಿ ನಮ್ಮನ್ನು ವಿಧಾನಸೌಧದ 3ನೇ ಮಹಡಿಗೆ ಕೂರಿಸಿದ್ದೀರಿ. ಈ ಅಧಿಕಾರದ ಋಣವನ್ನು ತೀರಿಸಿ ನಿಮ್ಮ ಬದುಕಿನಲ್ಲಿ ಶಕ್ತಿ ಹಾಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ವರದಿ ನೋಡಿದೆ. ಕೆಲವು ಯುವಕರು ಉದ್ಯೋಗವಿಲ್ಲದೆ ತಮಗೆ ಮದುವೆಯಾಗುತ್ತಿಲ್ಲ ಎಂದು ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದಾರೆ. ಇಂತಹ ಯುವಕರಲ್ಲಿ ಆತ್ಮಸ್ಥೈರ್ಯ ತುಂಬಲು ನಾವು ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನಿಮಗೆ ಅರ್ಪಿಸಿದ್ದೇವೆ. ನಿಮ್ಮ ಸರ್ಕಾರದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಹೇಳಿದ್ದಾರೆ.