ಬೆಂಗಳೂರು, ಡಿ 26 (DaijiworldNews/AK): ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಜನಪರ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಮೊದಲ ಹಂತವಾಗಿ ನಾಳೆ ಬೆಳಿಗ್ಗೆ 10 ಗಂಟೆಗೆ ಪದಾಧಿಕಾರಿಗಳ ಸಭೆ ಮತ್ತು ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಂಬಂಧ ಪ್ರಮುಖರ ಪ್ರಕ್ರಿಯೆಗೆ ಚಾಲನೆ ಕೊಡುವ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆ ಪ್ರಮುಖರು ಬಳಿಕ ಎಲ್ಲ ಜಿಲ್ಲೆಗಳಿಗೆ ತೆರಳಿ ಜಿಲ್ಲೆಯ ಎಲ್ಲ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಿದ್ದಾರೆ. ಎಲ್ಲರ ಅಭಿಪ್ರಾಯದೊಂದಿಗೆ ಪಕ್ಷವನ್ನು ಮುನ್ನಡೆಸುವ ತೀರ್ಮಾನ ರಾಜ್ಯಾಧ್ಯಕ್ಷರದು ಎಂದು ವಿವರಿಸಿದರು.
ನಾಡಿದ್ದು, ಡಿ.28ರಂದು ರಾಜ್ಯ ಪ್ರಮುಖರ ಸಭೆಯನ್ನು ರಾಜ್ಯಾಧ್ಯಕ್ಷರು ಕರೆದಿದ್ದಾರೆ ಎಂದರು.ಈ ಸಭೆಯಲ್ಲಿ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ರಾಜ್ಯದ ಮಾಜಿ ಸಚಿವರು, ಪ್ರಮುಖರು ಭಾಗವಹಿಸುತ್ತಾರೆ. ಅವರ ಅಭಿಪ್ರಾಯ ಪಡೆದು ಈ ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ಹೋರಾಟ, ಪಕ್ಷದ ಸಂಘಟನೆ ಹಾಗೂ ಲೋಕಸಭಾ ಚುನಾವಣೆ ಎದುರಿಸುವುದರ ಕುರಿತು ಎಲ್ಲರ ಸಲಹೆ ಪಡೆಯಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ತಳಮಟ್ಟಕ್ಕೆ ಸಂಘಟನೆ, ಹೋರಾಟ ಮತ್ತು ಪ್ರತಿಭಟನೆಯ ರೂಪುರೇಷೆ ಕೈಗೊಳ್ಳಲಾಗುತ್ತದೆ ಎಂದು ಅವರು ಪ್ರಕಟಿಸಿದರು.ರಾಜ್ಯದಲ್ಲಿ ರೈತರ ಸಾವಿನ ಸುದ್ದಿಗಳು ಮತ್ತೆ ಮತ್ತೆ ಕೇಳಿಬರುತ್ತಿರುವುದು ಬಹಳಷ್ಟು ಆಘಾತಕಾರಿ. ರೈತ ಸಮುದಾಯ ಧೈರ್ಯ ವಹಿಸಬೇಕು. ಬಿಜೆಪಿ, ರೈತ ಸಮುದಾಯಕ್ಕೆ ಆತ್ಮವಿಶ್ವಾಸವನ್ನು ತುಂಬಲಿದೆ ಎಂದು ತಿಳಿಸಿದರು.