ನವದೆಹಲಿ, ಡಿ 26 (DaijiworldNews/MR): ವಾಣಿಜ್ಯ ಹಡಗುಗಳ ಮೇಲಿನ ದಾಳಿಯ ಸಂಚುಕೋರರು ಸಮುದ್ರದಾಳದಲ್ಲಿದ್ದರೂ, ಅವರನ್ನು ಪತ್ತೆಹಚ್ಚಿ ಭಾರತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮುಂಬೈನ ನೇವಲ್ ಡಾಕ್ಯಾರ್ಡ್ನಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋದಿಂದ ವಿನ್ಯಾಸಗೊಂಡ ಸ್ವದೇಶಿ ನಿರ್ಮಿತ ಕ್ಷಿಪಣಿ ವಿಧ್ವಂಸಕ ‘ಇಂಫಾಲ್’ಯುದ್ಧನೌಕೆಯನ್ನು ಸೇರ್ಪಡೆಗೊಳಿಸಿ ಮಾತನಾಡಿದ ರಾಜನಾಥ್ ಸಿಂಗ್, ಸರ್ಕಾರವು ಹಡಗುಗಳ ಮೇಲೆ ನಡೆದ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದು ಅಪರಾಧಿಗಳು ಸಮುದ್ರದ ಆಳದಲ್ಲಿದ್ದರೂ ಅವರನ್ನು ಭಾರತ ಬೇಟೆಯಾಡಲಿದೆ ಎಂದು ಎಚ್ಚರಿಸಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ಸಮುದ್ರದಲ್ಲಿ ದಾಳಿಕೋರರಿಂದ ಪ್ರಕ್ಷುಬ್ಧತೆ ಬಹಳಷ್ಟು ಹೆಚ್ಚಾಗಿದ್ದು, ಭಾರತದ ಆರ್ಥಿಕ ಮತ್ತು ಕಾರ್ಯತಂತ್ರ ಬೆಳವಣಿಗೆ ಸಹಿಸದೆ, ಅಸೂಯೆ ಮತ್ತು ದ್ವೇಷ ತುಂಬಿದ ಶಕ್ತಿಗಳ ಕುಕೃತ್ಯವಾಗಿದೆ. ಭಾರತ ಸರ್ಕಾರವು ಅರಬ್ಬಿ ಸಮುದ್ರದಲ್ಲಿ 'ಎಂವಿ ಕೆಮ್ ಪ್ಲುಟೊ' ಮೇಲೆ ಇತ್ತೀಚಿನ ಡ್ರೋನ್ ದಾಳಿ ಮತ್ತು ಹಿಂದಿನ ದಾಳಿಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದರೊಂದಿಗೆ ಭಾರತೀಯ ನೌಕಾಪಡೆ ಸಮುದ್ರದ ಮೇಲೆ ಕಣ್ಗಾವಲು ಹೆಚ್ಚಿಸಿದೆ, ಯಾರೇ ಈ ದಾಳಿ ನಡೆಸಿದ್ದಾರೋ, ಸಮುದ್ರತಳದಲ್ಲಿ ಅಡಗಿದ್ದರೂ ಪತ್ತೆ ಮಾಡುತ್ತೇವೆ ಎಂದಿದ್ದಾರೆ.