ವಿಜಯಪುರ, ಏ 20(Daijiworld News/MSP): 'ಪ್ರಧಾನಿ ಮೋದಿ ತಾನು ಒಬ್ಬನೇ ಸ್ಟ್ರಾಂಗ್ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ ಆದರೆ ಅವರು ಸುಮ್ಮಸುಮ್ಮನೆ ಬಂಬಡಾ ಹೊಡೆಯೋದು ಅರ್ಥಹೀನ. ಯಾಕೆಂದರೆ ದೇಶದಲ್ಲಿ 1996 ಜೂನ್ 1ರಿಂದ 1997 ಏಪ್ರಿಲ್ 21 ರವರೆಗೆ ಅವರಿಗಿಂತಲೂ ಉತ್ತಮ ಸುಭದ್ರ ಆಡಳಿತ ನಾನೇ ನೀಡಿದ್ದೆ' ಎಂದು ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, 'ನನ್ನ ಆಡಳಿತಾವಧಿಯಲ್ಲಿ ದೇಶದೆಲ್ಲೆಡೆ ಶಾಂತಿ ನೆಲೆಸಿತ್ತು. ಈ ಅವಧಿಯಲ್ಲಿ ಒಂದೇ ಒಂದು ದಾಳಿ ನಡೆದಿರಲಿಲ್ಲ. ಯಾರಿದಂದಲೂ ಇತಿಹಾಸವನ್ನು ಬದಲಾಯಿಸಲು ಆಗಲ್ಲ. ದೇಶದ ಹಿತದೃಷ್ಟಿಯಿಂದ ನೋಡಿದರೆ ಮೋದಿ ಆಡಳಿತ ಸರಿಯಿಲ್ಲ. ಬಹುಮತ ಇದ್ದರೂ ಮೋದಿ ಸಮರ್ಥ ಆಡಳಿತ ನೀಡಲಿಲ್ಲ' ಎಂದು ಆರೋಪಿಸಿದರು.
'ದೇಶದಲ್ಲಿ ಮಾಯಾವತಿ, ಮಮತಾ ಬ್ಯಾನರ್ಜಿ, ಶರದ್ ಪವಾರ್, ಚಂದ್ರಬಾಬು ನಾಯ್ಡು ಹೀಗೆ ಇನ್ನೂ ಬಹಳ ಮಂದಿ ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ. ಆದರೆ ನಾನು ಪ್ರಧಾನಿ ಹುದ್ದೆಗೆ ಆಕಾಂಕ್ಷಿ ಅಲ್ಲ. ಆದರೆ ಇಲ್ಲಿ ಯಾರೇ ಪ್ರಧಾನಿಯಾದರೂ ಕಾಂಗ್ರೆಸ್ ಬೆಂಬಲ ಅಗತ್ಯವಿದೆ. ನಾವು ಈ ಹಿಂದೆಯೇ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸಿರುವುದಾಗಿ ಹೇಳಿದ್ದೇನೆ' ಎಂದೂ ಹೇಳಿದರು.
ಇದೇ ವೇಳೇ ತಮ್ಮ ಮೇಲೆ ದೈವಶಕ್ತಿ ಇರುವುದಾಗಿ ಹೇಳಿಕೆ ನೀಡಿದ ಗೌಡರು, "ನಾನಿನ್ನೂ ಜೀವಂತವಾಗಿದ್ದೇನೆ, ಆದರೆ ನನ್ನ ವಿರೋಧಿಗಳೆಲ್ಲರೂ ಸ್ವರ್ಗದಲ್ಲಿದ್ದಾರೆ. ನನ್ನೊಂದಿಗೆ ದೈವಕೃಪೆ ಇರುವುದಕ್ಕೆ ಇದೇ ಉತ್ತಮ ಉದಾಹರಣೆ" ಎಂದರು.