ನವದೆಹಲಿ, ಡಿ 27 (DaijiworldNews/MS): ಪಾಕಿಸ್ತಾನದ ಇತ್ತೀಚಿನ ನಡೆಯೂ, ಭಾರತದ ವಿರುದ್ದ ಯುದ್ದದ ಷಡ್ಯಂತ್ರ ಮಾಡುತ್ತಿದೆಯೇ ಎಂಬ ಅನುಮಾನ ಮೂಡಿಸುವಂತೆ ಮಾಡಿದೆ. ಭಾರತದ ಗಡಿಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ ಪಾಕ್ ವಾಯು ನೆಲೆ ನಿರ್ಮಿಸಿದ್ದು, ಚೀನಾದಿಂದ ಆಮದು ಮಾಡಿಕೊಳ್ಳಲಾದ SH-15SP ಹೊವಿಟ್ಜರ್ ಫಿರಂಗಿಯನ್ನೂ ಇಲ್ಲಿ ನಿಯೋಜಿಸಿದೆ.
ಇದು ಭಾರತದ ಭದ್ರತೆಗೆ ದೊಡ್ಡ ಅಪಾಯದ ಮುನ್ಸೂಚನೆಯಾಗಿದ್ದು ಗಡಿಯುದ್ದಕ್ಕೂ ಹೆಚ್ಚಿನ ನಿಗಾ ವಹಿಸಬೇಕಿದೆ ಎಂದು ಭಾರತೀಯ ಡಿಫೆನ್ಸ್ ರಿಸರ್ಚ್ ವಿಂಗ್ ವರದಿ ಮಾಡಿದೆ.
ಈ ವಾಯು ನೆಲೆಯೂ ಲಾಹೋರ್ ಸಮೀಪದಲ್ಲಿದೆ. ಪ್ರಸ್ತುತ ಈ ಏರ್ಫೀಲ್ಡ್ ಅನ್ನು ಪಾಕಿಸ್ತಾನವು ನಾಗರಿಕ ವಿಮಾನಗಳಿಗೆ ಅಥವಾ ಮಿಲಿಟರಿಗೆ ಬಳಸುತ್ತದೆಯೇ ಎಂಬುದು ತಿಳಿದಿಲ್ಲ. ಈ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳು ಅಥವಾ ಸೇನಾ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ನೀಡುತ್ತಿಲ್ಲ.
ಚೀನಾ ಮತ್ತು ಟರ್ಕಿಯಿಂದ ಆಮದು ಮಾಡಿಕೊಳ್ಳುವ ದಾಳಿಗೆ ಬಳಸಬಹುದಾದ ಡ್ರೋನ್ ಮತ್ತು ಹೆಲಿಕ್ಯಾಪ್ಟರ್ ಕಾರ್ಯಾಚರಣೆಗೆ ಈ ಏರ್ಫೀಲ್ಡ್ ಅನ್ನು ಬಳಸುವ ಸಾಧ್ಯತೆ ಇರುವ ಕಾರಣ ಇದು ನಮ್ಮ ದೇಶದ ಭದ್ರತೆಗೆ ದೊಡ್ಡ ಅಪಾಯದ ಸೂಚನೆಯಾಗಿದೆ ಎಂದು ವರದಿಯಾಗಿದೆ.