ಹೊಸದಿಲ್ಲಿ, ಡಿ 27 (DaijiworldNews/SK): ದೇಶವಿರೋಧಿ ಹಾಗೂ ಭಯೋತ್ಪಾದನಾ ಕೃತ್ಯಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮುಸ್ಲಿಂ ಲೀಗ್ ಜಮ್ಮು ಮತ್ತು ಕಾಶ್ಮೀರ (ಮಸಾರತ್ ಆಲಂ ಗ್ರೂಪ್) ಸಂಘಟನೆಗೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿದೆ.
ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಷ್ಟ್ರದ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ದಕ್ಕೆ ಉಂಟು ಮಾಡುವ ಯಾವುದೇ ಸಂಘಟನೆಯ ವಿರುದ್ದ ನರೇಂದ್ರ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.
ಇನ್ನು ಈ ಸಂಘಟನೆ ಮತ್ತು ಅದರ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದು, ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ಜನರನ್ನು ಪ್ರಚೋದಿಸಲು ಮುಂದಾಗಿದ್ದಾರೆ.
ಆದ್ದರಿಂದ ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸಾರತ್ ಆಲಂ ಬಣ) ಎಂಎಲ್ಜೆಕೆ-ಎಂಎಯನ್ನು ಯುಎಪಿಎ ಅಡಿಯಲ್ಲಿ ಕಾನೂನು ಬಾಹಿರ ಸಂಘಟನೆ ಎಂದು ಪೋಸ್ಟ್ ಮೂಲಕ ತಿಳಿಸಿದ್ದಾರೆ.