ಚೆನ್ನೈ, ಡಿ 28 (DaijiworldNews/MS): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಡಿಎಂಡಿಕೆ ನಾಯಕ ವಿಜಯಕಾಂತ್ (71) ವಿಧಿವಶರಾಗಿದ್ದಾರೆ.
ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಗುರುವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಆಸ್ಪತ್ರೆಯು ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಕ್ಯಾಪ್ಟನ್ ವಿಜಯಕಾಂತ್ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಇಲ್ಲಿ ದಾಖಲಾದ ಬಳಿಕ ವೆಂಟಿಲೇಟರಿ ಬೆಂಬಲದಲ್ಲಿದ್ದರು. ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಅವರು ಬೆಳಗ್ಗೆ ನಿಧನರಾಗಿದ್ದಾರೆ ಎಂದು ಹೇಳಿದೆ.
ವಿಜಯಕಾಂತ್ ಅವರು 1952ರಲ್ಲಿ ಮದುರೈನಲ್ಲಿ ಜನಿಸಿದರು. ಅವರು 80ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದರು. ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದು 154ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಲನಚಿತ್ರಗಳ ನಂತರ ಅವರು ರಾಜಕೀಯಕ್ಕೆ ಸೇರಿದರು, ಅವರು ಡಿಎಂಡಿಕೆ ಸ್ಥಾಪಿಸಿದರು. ಅವರು ಎರಡು ಬಾರಿ ವಿಧಾನಸಭಾ ಸದಸ್ಯರಾಗಿದ್ದರು
2011ರಿಂದ 2016ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದರು. ಅವರ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದರಿಂದ ರಾಜಕೀಯದಲ್ಲೂ ಆ್ಯಕ್ಟೀವ್ ಆಗಿರಲಿಲ್ಲ.