ಬೆಂಗಳೂರು, ಡಿ 28 (DaijiworldNews/AA): ನಿಗದಿತ ಕಿ.ಮೀ. ಗಳಷ್ಟು ಸಂಚರಿಸಿ ಸಾಮರ್ಥ್ಯ ಕಳೆದುಕೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಗುಜರಿಗೆ ಹಾಕಬೇಕು. ಗುಜರಿಗೆ ಹಾಕಿದ ಬಸ್ಗಳನ್ನು ಮತ್ತೆ ಸಂಚಾರಕ್ಕೆ ಬಳಸಲು ಅನುಮತಿ ನೀಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಸಾಮರ್ಥ್ಯ ಕಳೆದುಕೊಂಡು ಗುಜರಿಗೆ ಸೇರಬೇಕಾಗಿದ್ದ ಕೆಎಸ್ ಆರ್ ಟಿಸಿ ಬಸ್ ನಿಂದ ಅಪಘಾತ ಉಂಟಾಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣವೊಂದರಲ್ಲಿ ನ್ಯಾ. ರಾಮಚಂದ್ರ ಡಿ.ಹುದ್ದಾರ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಬಗ್ಗೆ ಮಹತ್ವದ ಆದೇಶ ಹೊರಡಿಸಲಾಗಿದೆ.
’ಬಸ್ಗಳು ಸಂಚಾರಕ್ಕೆ ಅರ್ಹವಾಗಿದೆ ಎಂದು ಪ್ರತಿ ವರ್ಷವೂ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಸುಸ್ಥಿತಿ ದೃಢೀಕರಣ ಪತ್ರ (ಎಫ್ ಸಿ)ವನ್ನು ಪಡೆದುಕೊಳ್ಳಬೇಕು. ಆರ್ ಟಿಓ ದಿಂದ ಎಫ್ ಸಿ ಪಡೆದ ಬಸ್ ಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಬೇಕು. ಆಗ್ಗಾಗ್ಗೆ ಬಸ್ ಗಳನ್ನು ಪರಿಶೀಲನೆ ಮಾಡುವುದರ ಜೊತೆಗೆ ದುರಸ್ತಿ ಮಾಡುತ್ತಿರಬೇಕು ಎಂಬ ವಿವಿಧ ನಿರ್ದೇಶನಗಳನ್ನು ಏಕಸದಸ್ಯ ನ್ಯಾಯಪೀಠ ನೀಡಿದೆ.
ಇನ್ನು ತೀರ್ಪಿನಲ್ಲಿ ನೀಡಲಾದ ನಿರ್ದೇಶನಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಪೀಠ ಆದೇಶ ಹೊರಡಿಸಿದೆ.