ಚಿತ್ರದುರ್ಗ, ಡಿ 29 (DaijiworldNews/PC): ಚಿತ್ರದುರ್ಗದ ಪಾಳು ಬಿದ್ದ ಮನೆಯೊಂದರಲ್ಲಿ ಮೂರು ಅಸ್ಥಿಪಂಜರ ಪತ್ತೆಯಾಗಿದ್ದು, ಈ ನಿಗೂಢತೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಚಿತ್ರದುರ್ಗ ನಗರ ಹೊರವಲಯದ ಚಳ್ಳಕೆರೆ ಟೋಲ್ ಗೇಟ್ನ ಬಳಿಯಲ್ಲಿ ಇರುವ ಪಾಳು ಮನೆಯಲ್ಲಿ ಶವಗಳು ಸಂಪೂರ್ಣ ಕೊಳೆತು ಮೂಳೆ ಕಾಣುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜಗನ್ನಾಥರೆಡ್ಡಿ ಎಂಬುವರಿಗೆ ಸೇರಿದ ಮನೆ ಇದಾಗಿದ್ದು ಮನೆ ಮುಂಭಾಗ ಜಗನ್ನಾಥರೆಡ್ಡಿ ಹೆಸರಿನ ಬೋರ್ಡ್ ನೇತಾಡುತ್ತಿದೆ.
ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿಯವರಾದ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರು ತನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸುಮಾರು 2 ಕೋಟಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರಂತೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರೋಗ್ಯ ಮತ್ತೊಷ್ಟು ಹದಗೆಟ್ಟಿತ್ತು. ಇದರಿಂದ ಬೇಸತ್ತು ಯಾರ ಮನೆಗೆ ಯಾರೇ ಬಂದರೂ ಬಾಗಿಲು ತೆಗೆಯದೆ ಕಿಟಕಿಯಲ್ಲಿ ಮಾತಾಡಿಸಿ ಕಳುಹಿಸಿತಿದ್ದರು ಎನ್ನಲಾಗಿದೆ.
ಮನೆಯ ಕೊಠಡಿ ಒಳಗಡೆ ಇರುವ ಮಂಚದ ಮೇಲೆ ಒಂದು ಅಸ್ಥಿಪಂಜರ, ನೆಲದ ಮೇಲೆ ಹಾಗೂ ಬಾಗಿಲು ಹಿಂದೆ ಅಸ್ಥಿ ಪಂಜರ ಕಂಡು ಬಂದಿದ್ದು, ಅಸ್ಥಿಪಂಜರ ಬಳಿ ಆಕ್ಸಿಜನ್ ಸಿಲಿಂಡರ್ ಕಂಡು ಬಂದಿವೆ. ಜಗನ್ನಾಥ ರೆಡ್ಡಿ, ಕೃಷ್ಣಾರೆಡ್ಡಿ, ಜಗನ್ನಾಥ ರೆಡ್ಡಿ ಪತ್ನಿಯ ಅಸ್ಥಿಪಂಜರಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಕಾಯಿಲೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅನಿಲ್ ಕುಮಾರ್, ಸಿಪಿಐ ನಹಿಂ ಅಹಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನವೆಂಬರ್ 2022 ರಿಂದ ಯಾರಿಗೂ ಸಹ ಕಾಣದೆ ಇರುವುದು ಕಂಡುಬಂದಿರುತ್ತದೆ ನವೆಂಬರ್ ನಂತರದ ದಿನಗಳಲ್ಲಿ ಮನೆಯ ಸುತ್ತಮುತ್ತ ಸ್ವಲ್ಪ ದುರ್ವಾಸನೆ ಬಂದಂತಹ ಸ್ಥಿತಿಯಿತ್ತು ನಾವು ಯಾವುದೋ ಪ್ರಾಣಿ ಸತ್ತಿರುವ ವಾಸನೆ ಬರುತ್ತದೆ ಎಂದು ತಿಳಿದುಕೊಂಡಿದ್ದೆವು ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ.