ನವದೆಹಲಿ,ಡಿ 29 (DaijiworldNews/PC):ತಾನು ಐಪಿಎಲ್ ಆಟಗಾರ, ಕರ್ನಾಟಕದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಎಂದು ಹೇಳಿಕೊಂಡು ದೇಶದ ವಿವಿಧ 5ಸ್ಟಾರ್ ಹೋಟೆಲ್ಗಳು, ಐಷಾರಾಮಿ ರೆಸಾರ್ಟ್ಗಳು, ಜಾಗತಿಕ ಕ್ರೀಡಾ ಬ್ರ್ಯಾಂಡ್ಗಳು ಇನ್ನೂ ಹಲವು ಜನರಿಗೆ ವಂಚಿಸಿದ್ದ ಯುವಕನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಹರಿಯಾಣ ಮೂಲದ ಮೃಣಾಂಕ್ ಸಿಂಗ್ (25) ಬಂಧಿತ ಎಂದು ಗುರುತಿಸಲಾಗಿದೆ.
ಈತನಿಗೆ ಸ್ಟಾರ್ ಹೋಟೆಲ್ಗಳಲ್ಲಿ ತಂಗುವುದು, ದುಬಾರಿ ಶೋಕಿ ಮಾಡಲು ಆತ ಸಾಲು ಸಾಲು ವಂಚನೆಗಳನ್ನು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತ 2014ರಿಂದ 2018ರವರೆಗೆ ತಾನು ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದಲ್ಲಿ ಆಡಿದ್ದೆ ಎನ್ನುವ ಮೂಲಕ ತಾನೊಬ್ಬ ಜನಪ್ರಿಯ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿದ್ದ.ಇಷ್ಟೇ ಅಲ್ಲದೇ ಮಹಿಳೆಯರನ್ನು ನಂಬಿಸಿ, ಅವರ ಜತೆ ಐಷಾರಾಮಿ ರೆಸ್ಟೋರೆಂಟ್ಗಳಿಗೆ ಹೋಗುತ್ತಿದ್ದ.
2022ರಲ್ಲಿ ಈತ ದೆಹಲಿ ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ಒಂದು ವಾರ ತಂಗಿದ್ದ. 5.53 ಲಕ್ಷ ರು. ಬಿಲ್ ಆಗಿತ್ತು. ಅಡಿಡಾಸ್ ಕಂಪನಿಯವರು ನಿಮಗೆ ಹಣ ಪಾವತಿಸುತ್ತಾರೆ ಎಂದು ಹೇಳಿದ್ದ. ಅದನ್ನು ಹೋಟೆಲ್ನವರೂ ನಂಬಿದ್ದರು. ಆದರೆ ಹಣ ಮಾತ್ರ ಸಿಗಲಿಲ್ಲ. ಬಳಿಕ ಸ್ವಿಚಾಫ್ ಮಾಡಿಕೊಂಡಿದ್ದ. ಹೀಗಾಗಿ ಆ ಸಂಸ್ಥೆ ದೂರು ನೀಡಿತ್ತು.
ಈತ ಡಿ.25ರಂದು ಹಾಂಕಾಂಗ್ಗೆ ಪರಾರಿಯಾಗುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ಆತನು ತಾನು ಕರ್ನಾಟಕದ ಐಪಿಎಸ್ ಅಧಿಕಾರಿ, ಎಡಿಜಿಪಿ ಅಲೋಕ್ ಕುಮಾರ್ ಎಂದು ಕತೆ ಕಟ್ಟಿದ. ಕೊನೆಗೆ ಅಲೋಕ್ ಹೆಸರಿನಲ್ಲಿ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ‘ನನ್ನ ಪುತ್ರನನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಸಹಾಯ ಮಾಡಿ ಎಂದು ಕೇಳಿದ್ದ.
ಕ್ರಿಕೆಟಿಗ ರಿಷಬ್ ಪಂತ್ ಅವರಲ್ಲಿ ನಾನು ದುಬಾರಿ ಬ್ರ್ಯಾಂಡ್ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಡಿಸುವ, ಅಗ್ಗದ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದೇನೆ ಎಂದು ನಂಬಿಸಿದ್ದ. ಹೀಗಾಗಿ ರಿಷಬ್ ಅವರು 1.6 ಕೋಟಿ ರು. ಹಣ ವರ್ಗ ಮಾಡಿದ್ದರು. ಈತನ ವಂಚನೆ ಗೊತ್ತಾಗಿ ಹಣ ವಾಪಸ್ ಕೇಳಿದ್ದರು. ಈತ ಕೊಟ್ಟಿದ್ದ ಚೆಕ್ ಬೌನ್ಸ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಈತ ಕುಟುಂಬದಿಂದ ದೂರವಿದ್ದು, ವಂಚನೆ ಎಸಗುತ್ತಿದ್ದ ಎನ್ನಲಾಗಿದೆ.