ನವದೆಹಲಿ, ಡಿ 30 (DaijiworldNews/MR): ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿವಾಸದಲ್ಲಿದ್ದ ಕುಸ್ತಿ ಸಂಸ್ಥೆಯ ಕಚೇರಿಯನ್ನು ಸ್ಥಳಾಂತರಿಸಲಾಗಿದೆ.
ಲೈಗಿಂಕ ಕಿರುಕುಳದ ಆರೋಪದಿಂದಾಗಿ ಬ್ರಿಜ್ ಭೂಷಣ್ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಅವರ ಆಪ್ತರಾಗಿರುವ ಸಂಜಯ್ ಸಿಂಗ್ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಹೀಗಾಗಿ ಕಚೇರಿ ತಮ್ಮ ಮನೆಯಲ್ಲೇ ಇರುವಂತೆ ನೋಡಿಕೊಂಡ ಬ್ರಿಜ್ ಭೂಷಣ್ ಈ ಮೂಲಕ ಪರೋಕ್ಷವಾಗಿ ಕುಸ್ತಿಪಟುಗಳ ಮೇಲೆ ಹಿಡಿತ ಸಾಧಿಸುವ ಯೋಜನೆ ರೂಪಿಸಿದ್ದರು.
ಆದರೆ ಕ್ರೀಡಾ ಸಚಿವಾಲಯವು ಇತ್ತೀಚೆಗೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ ಹೊಸದಾಗಿ ರಚಿಸಲಾದ ಕುಸ್ತಿ ಸಮಿತಿಯನ್ನು ಡಿ.24ರಂದು ಅಮಾನತುಗೊಳಿಸಿತ್ತು. ಇದೀಗ ಭಾರತೀಯ ಕುಸ್ತಿ ಒಕ್ಕೂಟದ ಕಚೇರಿಯನ್ನು ನವದೆಹಲಿಯ ಹರಿ ನಗರಕ್ಕೆ ಸ್ಥಳಾಂತರಿಸಲಾಗಿದೆ. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಪ್ರಕರಣ ದೆಹಲಿ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ.
ಸಂಜಯ್ ಸಿಂಗ್ ಅವರು ಡಬ್ಲ್ಯುಎಫ್ಐ ಮುಖ್ಯಸ್ಥರಾಗಿ ಆಯ್ಕೆಯಾದ ನಂತರ, ಸಾಕ್ಷಿ ಮಲಿಕ್ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ಬಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದೆ, ವಿನೇಶ್ ಫೋಗಟ್ ಖೇಲ್ ರತ್ನ ಹಾಗೂ ಅರ್ಜುನ್ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ದರಿಸಿದ್ದರು. ಅಲ್ಲದೆ ಪ್ರಧಾನಿ ಮೋದಿಗೂ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದರು.