ಬೆಂಗಳೂರು, ಜ 02 (DaijiworldNews/SK): ರಾಜ್ಯದಲ್ಲಿ ಕೋವಿಡ್ ನ ಜೆಎನ್1 ರೂಪಾಂತರಿ ಸೋಂಕು ಅನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದ್ದು, ಒಟ್ಟಾರೆಯಾಗಿ 30 ಸಾವಿರ ಡೋಸ್ ಕೊರ್ಬೆವ್ಯಾಕ್ಸ್ ಲಸಿಕೆ ಸರಬರಾಜು ಮಾಡಿದೆ.
ಕೇಂದ್ರ ಸರ್ಕಾರದ ಶಿಫಾರಸ್ಸಿನಂತೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪಡೆದು ಆರು ತಿಂಗಳು ಅಥವಾ 26 ತಿಂಗಳು ಕಳೆದು ಹಾಗೂ ಬೂಸ್ಟರ್ ಡೋಸ್ ಪಡೆಯದವರು ಈ ಲಸಿಕೆ ಪಡೆಯಬಹುದಾಗಿದೆ.
ಇನ್ನು ಈ ಲಸಿಕೆಯನ್ನು ಜಿಲ್ಲಾ ಆಸ್ಪತ್ರೆಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ನಿರ್ಣಯಿಸಲಾದ ತಾಲೂಕು ಆಸ್ಪತ್ರೆಗಳಿಗೆ ಮಾತ್ರ ಹಂಚಿಕೆ ಮಾಡಿ, ಕೋವಿಡ್-19 ಲಸಿಕಾಕರಣದ ಮಾರ್ಗಸೂಚಿಯಂತೆಯೇ ಈ ಲಸಿಕೆಯನ್ನು ನೀಡಲು ಆದೇಶಿಸಲಾಗಿದೆ. ಕೊರ್ಬೆವ್ಯಾಕ್ಸ್ ಲಸಿಕೆಯನ್ನು 60 ವರ್ಷ ದಾಟಿದವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ಲಸಿಕೆಯನ್ನು ಪಡೆಯಬಹುದು.
ಕರ್ನಾಟಕ ರಾಜ್ಯಕ್ಕೆ ಒಟ್ಟಾರೆಯಾಗಿ 30 ಸಾವಿರ ಡೋಸ್ ಕೊರ್ಬೆವ್ಯಾಕ್ಸ್ ಲಸಿಕೆ ಸರಬರಾಜು ಮಾಡಲಾಗಿದ್ದು, ಅದರಲ್ಲಿ ದಕ್ಷಿಣ ಕನ್ನಡಕ್ಕೆ 1,14೦ ಮತ್ತು ಉಡುಪಿ ಜಿಲ್ಲೆಗೆ 52೦ ಲಸಿಕೆಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.