ಬೆಂಗಳೂರು,,ಡಿ 03 (DaijiworldNews/AK): ಶ್ರೀನಗರದ ಲಾಲ್ಚೌಕದಲ್ಲಿ ಕಾರ್ಯಕರ್ತರು ಮುರಳಿ ಮನೋಹರ್ ಜೋಷಿಯವರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ಪೊಲೀಸರ ,ರಾಜ್ಯ ಸರಕಾರದ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದರು.
ರಾಮ ವಿರೋಧಿ ರಾಜ್ಯ ಸರಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಇಂದು ನಡೆದ ಬಿಜೆಪಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿ, ಮುಖ್ಯಮಂತ್ರಿಗಳಿಗೆ 48 ಗಂಟೆಗಳ ಗಡುವು ಕೊಡುತ್ತೇವೆ. ಶ್ರೀಕಾಂತ್ ಪೂಜಾರಿಯವರ ಬಿಡುಗಡೆ ಮಾಡದಿದ್ದರೆ, ಬಿಜೆಪಿ ಯುವಮೋರ್ಚಾ ವತಿಯಿಂದ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇವತ್ತು ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು. ಅವಶ್ಯಕತೆ ಬಂದರೆ ರಸ್ತೆಗಿಳಿದು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೊಘಲರ ಆಡಳಿತ, ತಾಲಿಬಾಲ್ ಆಡಳಿತ ಇದೆಯೇ ಎಂದು ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ. ಹಿಂದೂ ಹಕ್ಕುಗಳನ್ನು ತುಳಿಯುವ ಕೆಲಸ, ಹಿಂದೂ ವಿರೋಧಿ ನೀತಿ ನಿಮ್ಮದು. ನಿಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ಪಿಎಫ್ಐ ವಿರುದ್ಧ ಇದ್ದ ಕೇಸುಗಳನ್ನು ರದ್ದು ಮಾಡಿದ್ದ ಸರಕಾರ ಕಾಂಗ್ರೆಸ್ಸಿನದು. ಡಿ.ಜೆ.ಹಳ್ಳಿ, ಕೆಜೆ ಹಳ್ಳಿ ಕೇಸುಗಳನ್ನು ಹಿಂದಕ್ಕೆ ಪಡೆಯಲು ಮುಂದಾಗಿದ್ದಾರೆ. ಕನ್ನಡ ವಿರೋಧಿ ಸರಕಾರ ಇದು. ರೈತರ ವಿರುದ್ಧ ಕೇಸು ಹಾಕುತ್ತಿದ್ದಾರೆ. ಹಿಂದೂ, ರಾಮ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದರು.
ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನ ಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ. ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆ ಆಗಲಿದೆ. ಎಲ್ಲ ಕಡೆ ಉತ್ಸಾಹ, ಸಂತಸದ ವಾತಾವರಣ ಇದೆ ಎಂದು ವಿವರಿಸಿದರು.
ರಾಜ್ಯ, ದೇಶದಲ್ಲಿ ಹಬ್ಬದ ವಾತಾವರಣವಿದೆ. ಇಂಥ ಸಂದರ್ಭದಲ್ಲಿ ಹಿಂದೂವಿರೋಧಿ ಕಾಂಗ್ರೆಸ್ ಸರಕಾರ, ಪ್ರಭು ಶ್ರೀರಾಮಚಂದ್ರ ವಿರೋಧಿ ಸರಕಾರವು ಮಂತ್ರಾಕ್ಷತೆ ಕೊಡುವುದನ್ನು ತಡೆಯುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಹಿಂದೂಗಳ ಮನಸ್ಸಿಗೆ ನೋವಾಗುವ ಹೇಳಿಕೆ ಕೊಡುತ್ತಿದ್ದಾರೆ. ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿಯವರ ಬಂಧನದ ದುಸ್ಸಾಹಸಕ್ಕೆ ಕಾಂಗ್ರೆಸ್ ಸರಕಾರ ಕೈಹಾಕಿದೆ. 31 ವರ್ಷಗಳ ಹಿಂದಿನ ಕೇಸು ಇದಾಗಿದೆ. ಈ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್ ಅವರು ಮಾತನಾಡಿ, ಹೆಸರಿನಲ್ಲಿ ರಾಮ ಇದ್ದರೆ ಸಾಕೇ? ನಿಮ್ಮ ಮನಸ್ಸಿನಲ್ಲಿ ರಾಮ ಇರಬೇಕಿತ್ತು ಎಂದು ಮುಖ್ಯಮಂತ್ರಿಗಳ ಕ್ರಮವನ್ನು ಟೀಕಿಸಿದರು.ಶ್ರೀಕಾಂತ್ ಪೂಜಾರಿಯವರ ಬಿಡುಗಡೆ ಆಗುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು. ಓಲೈಕೆ ರಾಜಕಾರಣ ನಿಮ್ಮದಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ನೀತಿ ಕುಲಗೆಟ್ಟದ್ದು. ಹಿಜಾಬ್ ಪರ, ಶ್ರೀರಾಮನ ವಿರುದ್ಧ ನೀತಿಯಿಂದ ಜನತೆ ರಾಜ್ಯ ಸರಕಾರದ ವಿರುದ್ಧ ಒಗ್ಗಟ್ಟಾಗಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಡಿ.ವಿ.ಸದಾನಂದಗೌಡ ಅವರು ನುಡಿದರು.