ಮುಂಬೈ, ಜ 03 (DaijiworldNews/HR): ನಟಿ ಅಂಜಲಿ ಪಾಟೀಲ್ ಅವರು ಸೈಬರ್ ವಂಚಕರ ಬಲೆಗೆ ಬಿದ್ದಿದ್ದು, ಅಂಜಲಿ 5.79 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಮುಂಬೈನ ಅಂಧೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ಅಂಜಲಿಗೆ ದೀಪಕ್ ಶರ್ಮಾ ಎಂಬ ವ್ಯಕ್ತಿಯಿಂದ ಕರೆ ಬಂದಿದ್ದು, ಈ ಕರೆಯಲ್ಲಿ, ವ್ಯಕ್ತಿಯು ತಾನು ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ತೈವಾನ್ಗೆ ಕಳುಹಿಸಿದ್ದ ನಿಮ್ಮ ಹೆಸರಿನ ಪಾರ್ಸೆಲ್ ನಲ್ಲಿ ಡ್ರಗ್ಸ್ ಪತ್ತೆಯಾಗಿದೆ ಇದನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಪಾರ್ಸೆಲ್ ಬಾಕ್ಸ್ ಪರಿಶೀಲನೆ ನಡೆಸಿದ ವೇಳೆ ನಿಮ್ಮ ಆಧಾರ್ ಕಾರ್ಡ್ ಪ್ರತಿ ಸಿಕ್ಕಿರುವುದಾಗಿ ತಿಳಿಸಿದ್ದಾನೆ.
ಇನ್ನು ಹೆಚ್ಚಿನ ವಿವರಗಳಿಗಾಗಿ ಮುಂಬೈ ಸೈಬರ್ ಪೊಲೀಸರನ್ನು ಸಂಪರ್ಕಿಸಲು ಅಂಜಲಿಯನ್ನು ಹೇಳಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಅಂಜಲಿಗೆ ಬ್ಯಾನರ್ಜಿ ಎಂಬ ವ್ಯಕ್ತಿಯಿಂದ ಸ್ಕೈಪ್ ಕರೆ ಬಂದಿದ್ದು ತಾನು ಮುಂಬೈ ಸೈಬರ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ವ್ಯಕ್ತಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಮೂರು ಬ್ಯಾಂಕ್ ಖಾತೆಗಳಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಅಂಜಲಿಗೆ ತಿಳಿಸಿದ್ದಾನೆ. ಪರಿಶೀಲನೆ ಪ್ರಕ್ರಿಯೆ ಹೆಸರಿನಲ್ಲಿ ಆಕೆಯಿಂದ ಮೊದಲು 96 ಸಾವಿರದ 525 ರೂ. ವರ್ಗಾಯಿಸುವಂತೆ ಹೇಳಿದ ಆತ ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಪ್ರಕರಣದಿಂದ ಹೊರಬರಲು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ ಎಂದು ನಟಿ ಬಳಿ ಹೇಳಿಕೊಂಡಿದ್ದಾನೆ ಇದನ್ನು ನಂಬಿದ ನಟಿ 4,83,291 ರೂ. ಹಣವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ಜಮಾ ಮಾಡಲು ಹೇಳಿದ್ದಾನೆ ಇದನ್ನು ನಂಬಿದ ನಟಿ ಹಣ ವರ್ಗಾವಣೆ ಮಾಡಿದ್ದಾಳೆ.
ಈ ವಿಚಾರದ ಬಗ್ಗೆ ತಿಳಿಯಲು ನಟಿ ಆ ವ್ಯಕ್ತಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ ಇದಾದ ಕೆಲವು ಸಮಯದ ಬಳಿಕ ತಾನು ಮೋಸ ಹೋಗಿರುವುದು ಆಕೆ ಗಮನಕ್ಕೆ ಬಂದಿದೆ.
ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.