ರಾಯಚೂರು,ಏ.21(Daijiworld News/AZM) :ಅನುಮಾನಾಸ್ಪದವಾಗಿ ಮೃತಪಟ್ಟಿರುವ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.
ರಾಜ್ಯಾದ್ಯಂತ ಬಾರಿ ಆಕ್ರೋಶಕ್ಕೆ ಕಾರಣವಾಗಿದ್ದ ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಏ.16ರಂದು ವಿದ್ಯಾರ್ಥಿನಿ ಮೃತದೇಹ ಪತ್ತೆಯಾಗಿತ್ತು.
ಕರ್ನಾಟಕ ಸರ್ಕಾರ ಶನಿವಾರ ರಾತ್ರಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ. ಸಿಐಡಿ ಎಸ್ಪಿ ಶರಣಪ್ಪ, ಅನೂಪ್ ಶೆಟ್ಟಿ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುದರ್ಶನ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣ ಸಿಐಡಿಗೆ ವರ್ಗಾವಣೆ ಆಗುತ್ತಿದ್ದಂತೆ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ಭಾನುವಾರ ಮಧ್ಯಾಹ್ನದ ವೇಳೆಗೆ ಸಿಐಡಿ ತಂಡ ರಾಯಚೂರಿಗೆ ಆಗಮಿಸಲಿದ್ದು, ತನಿಖೆಯನ್ನು ಆರಂಭಿಸಲಿದೆ. ಸ್ಥಳೀಯ ಪೊಲೀಸರಿಂದ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ.
ನವೋದಯ ಇಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಏಪ್ರಿಲ್ 13ರಂದು ಪರೀಕ್ಷೆ ಬರೆಯಲು ಹೋಗಿದ್ದಳು, ಬಳಿಕ ನಾಪತ್ತೆಯಾಗಿದ್ದಳು. ಏಪ್ರಿಲ್ 16ರಂದು ಕಾಲೇಜಿನಿಂದ 4 ಕಿ.ಮೀ.ದೂರದಲ್ಲಿ ಆಕೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಡೆತ್ ನೋಟ್ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ರಾಜ್ಯದಲ್ಲಿ ಆಕ್ರೋಶವೆದ್ದಿದೆ. ವಿದ್ಯಾರ್ಥಿನಿಗೆ ನ್ಯಾಯಕೊಡಿಸಿ ಎಂದು ಒತ್ತಾಯಿಸುತ್ತಿದ್ದಾರೆ.