ಬೆಂಗಳೂರು, ಜ 5 (DaijiworldNews/SK): ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ ಈಗ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಶ್ರೀಕಾಂತ್ ವಿರುದ್ದ ಇನ್ನು 16 ಪ್ರಕರಣಗಳು ಬಾಕಿ ಇದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಆರ್.ಅಶೋಕ್ ಟ್ವೀಟ್ನಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ನ ಮೂಲಕ ಪ್ರತಿಕ್ರಿಯಿಸಿದ ಅವರು, ಕರಸೇವಕ ಶ್ರೀಕಾಂತ್ ಪೂಜಾರಿ ಅವರ ವಿರುದ್ದ ಇನ್ನು 16 ಪ್ರಕರಣಗಳು ಬಾಕಿ ಇದೆ ಎಂದು ಸುಳ್ಳು ಹೇಳಿಕೆ ನೀಡಿದಿರಲ್ಲ ಸಿದ್ದರಾಮಯ್ಯ ಅವರೇ, ಆ ಪ್ರಭು ಶ್ರೀರಾಮನು ನಿಮ್ಮನ್ನ ಎಂದಿಗೂ ಕ್ಷಮಿಸಲಾರ ಎಂದು ವ್ಯಂಗ್ಯವಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಗೆ ಯಾರೋ ಇಲ್ಲಸಲ್ಲದ ವಿಚಾರವನ್ನು ಹೇಳಿ ತಲೆ ಕೆಡಿಸುತ್ತಿದ್ದಾರೆ ಅಥವಾ ಎರಡನೆಯದಾಗಿ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಕೆಣಕಲು ಉದ್ದೇಶಪೂರ್ವಕವಾಗಿ ಈ ಪ್ರಕರಣಕ್ಕೆ ಮರುಜೀವ ನೀಡಿದ್ದೀರಿ. ಇವೆರಡರಲ್ಲಿ ಯಾವುದು ಸತ್ಯವಾದರೂ ತಾವು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆ ಬಹಳ ಕಡಿಮೆ ಇದೇ ಎಂದು ಕಿಡಿಕಾರಿದ್ದಾರೆ.
ಇನ್ನು ಈ ಹೇಳಿಕೆಯನ್ನು ಹಿಂಪಡೆಯ ಬೇಕು ಅಥವಾ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಿ ರಾಜೀನಾಮೆ ನೀಡಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಒಬ್ಬ ಸಮರ್ಥ ಮುಖ್ಯಮಂತ್ರಿಗೆ ಅಧಿಕಾರ ಬಿಟ್ಟುಕೊಡಿ ಎಂದು ಆರ್.ಅಶೋಕ್ ಒತ್ತಾಯಿಸಿದ್ದಾರೆ.