ನವದೆಹಲಿ, ಜ 06 (DaijiworldNews/AA): ಇಸ್ರೋದ ಆದಿತ್ಯ-ಎಲ್ 1 ನೌಕೆ 110 ದಿನಗಳ ನಂತರ ತನ್ನ ಅಂತಿಮ ಕಕ್ಷೆಯನ್ನು ಶನಿವಾರ ತಲುಪುವಲ್ಲಿ ಯಶಸ್ವಿಯಾಗಿದೆ.
2023 ರ ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದ್ದ ಆದಿತ್ಯ-ಎಲ್ 1 ನೌಕೆ 15 ಲಕ್ಷ ಕಿಮೀ ಕ್ರಮಿಸಿ ನಿಗದಿತ ಕಕ್ಷೆಯನ್ನು ತಲುಪಿದೆ. ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಮತ್ತೊಂದು ಮೈಲುಗಲ್ಲು ಸೃಷ್ಟಿಸಿದೆ ಎಂದು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ದೇಶದ ಪ್ರಥಮ ಸೌರ ಮಿಷನ್ ಆದಿತ್ಯ-ಎಲ್ 1 ತನ್ನ ಅಂತಿಮ ಕಕ್ಷೆ ತಲುಪಿದೆ. ಇದು ಅತ್ಯಂತ ಸಂಕೀರ್ಣ ಹಾಗೂ ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ಮಧ್ಯೆ ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿ. ಈ ಅಸಾಧಾರಣ ಸಾಧನೆಯನ್ನು ಶ್ಲಾಘಿಸುತ್ತೇನೆ. ಮಾನವೀಯತೆಯ ಪ್ರಯೋಜನಕ್ಕಾಗಿ ನಾವು ವಿಜ್ಞಾನದ ಹೊಸ ಸಾಧನೆಗಳನ್ನು ಸಾಧಿಸುವುದನ್ನು ಮುಂದುವರಿಸುತ್ತೇವೆ ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನು ಆದಿತ್ಯ- ಎಲ್ 1 ತನ್ನ ಅಂತಿಮ ಕಕ್ಷೆ ತಲುಪುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು, ಆದಿತ್ಯ- ಎಲ್ 1 ಸೂರ್ಯನನ್ನು ನಿರಂತರವಾಗಿ ಪರಿಶೀಲನೆ ನಡೆಸುವುದರಿಂದ, ಇದು ಭೂಮಿಗೆ ಸನ್ನಿಹಿತವಾದ ಸೌರ ವಿದ್ಯುತ್ಕಾಂತೀಯ ಪರಿಣಾಮಗಳ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತದೆ. ಇದು ನಮ್ಮ ಉಪಗ್ರಹಗಳನ್ನು, ವಿದ್ಯುತ್ ಮತ್ತು ಸಂವಹನ ಜಾಲಗಳನ್ನು ಅಡ್ಡಿಪಡಿಸದಂತೆ ರಕ್ಷಿಸುತ್ತದೆ ಎಂದರು.