ಹುಬ್ಬಳ್ಳಿ,ಜ 7 (DaijiworldNews/AK):ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್ ಸರಕಾರ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಏಳೇ ತಿಂಗಳಲ್ಲಿ ಸರಕಾರಕ್ಕೆ ಅಧಿಕಾರದ ಮದ ಏರಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ದಬ್ಬಾಳಿಕೆಯ ಸರಕಾರ. ಮುಖ್ಯಮಂತ್ರಿಗಳು, ಮಂತ್ರಿಗಳ ಭಾಷೆ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿದೆ. ಅನ್ಯಾಯದ ವಿರುದ್ದ ಹೋರಾಟ ಮಾಡಿದರೆ ಅವರ ವಿರುದ್ಧ ಕೇಸ್ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸರಕಾರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ಇದೆ. ಕರ್ನಾಟಕದಲ್ಲಿ ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ಶ್ರೀಕಾಂತ್ ಪೂಜಾರಿ ಕೇಸ್ ಒಂದು. ಅವರ ವಿರುದ್ದ ಯಾವುದೇ ಪ್ರಕರಣ ಇಲ್ಲದಿದ್ದರೂ, ಅವರನ್ನು ಒಳಗಡೆ ಹಾಕಿದರು. ಇದು ತುರ್ತುಪರಿಸ್ಥಿತಿಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.