ನವದೆಹಲಿ, ಎ22(Daijiworld News/SS): ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತವು ಶ್ರೀಲಂಕಾ ಜತೆಯಲ್ಲಿ ನಿಲ್ಲಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಭೀಕರ ಘಟನೆಯನ್ನು ಖಂಡಿಸುತ್ತೇನೆ. ನಮ್ಮ ನಡುವೆ ಇಂಥ ಘಟನೆಗಳಿಗೆ ಆಸ್ಪದವೇ ಇಲ್ಲ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತವು ಶ್ರೀಲಂಕಾ ಜತೆಯಲ್ಲಿ ನಿಲ್ಲಲಿದೆ. ಅಸುನೀಗಿದವರಿಗೆ ನನ್ನ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಕ್ರೈಸ್ತರ ಪವಿತ್ರ ಹಬ್ಬ ಈಸ್ಟರ್ ದಿನ (ಏ.21) ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಭೀಕರ ಆತ್ಮಾಹುತಿ ದಾಳಿ ನಡೆದಿತ್ತು. ಚರ್ಚ್ಗಳಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿದ್ದವರ ಮೇಲೆ ಮತ್ತು ವಿಲಾಸಿ ಹೊಟೇಲಿನಲ್ಲಿ ತಂಗಿದ್ದವರನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟಿಸಲಾಗಿದ್ದು, ಕನಿಷ್ಠ 215 ಮಂದಿ ಸಾವಿಗೀಡಾಗಿದ್ದಾರೆ. 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕೊಲಂಬೋದಲ್ಲಿನ ಸೈಂಟ್ ಆ್ಯಂಟನಿ ಚರ್ಚ್, ಪಶ್ಚಿಮ ಕರಾವಳಿ ನಗರ ನೆಗೊಂಬೋದಲ್ಲಿನ ಸೈಂಟ್ ಸೆಬಾಸ್ಟಿಯನ್ ಚರ್ಚ್, ಪೂರ್ವ ಭಾಗದ ಬಟ್ಟಿಕಲೋವಾದಲ್ಲಿನ ಮತ್ತೂಂದು ಚರ್ಚ್ನಲ್ಲಿ ಏಕಕಾಲಕ್ಕೆ ರವಿವಾರ ಬೆಳಗ್ಗೆ 8.45ಕ್ಕೆ ಸ್ಫೋಟ ಸಂಭವಿಸಿತ್ತು. ಇದರ ಜತೆಗೆ ಮೂರು ಪಂಚತಾರಾ ಹೊಟೇಲ್ ಶಾಂಗ್ರೀಲಾ, ದ ಸಿನ್ನಮಾನ್ ಗ್ರ್ಯಾಂಡ್ ಮತ್ತು ಕಿಂಗ್ಸ್ಬರಿಗಳಲ್ಲಿಯೂ ಸ್ಫೋಟಗಳು ನಡೆದಿತ್ತು. ಅಪರಾಹ್ನದ ಬಳಿಕ ರಾಜಧಾನಿ ದಕ್ಷಿಣ ಭಾಗದ ಹೊರವಲಯದಲ್ಲಿರುವ ಮೃಗಾಲಯದಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಅಸುನೀಗಿದ್ದಾರೆ. ಶ್ರೀಲಂಕೆಯ ಇತಿಹಾಸದಲ್ಲಿಯೇ ಇದು ಅತ್ಯಂತ ಭೀಕರ ದಾಳಿ ಎಂದೇ ಹೇಳಲಾಗಿದೆ.
ಸರಣಿ ಬಾಂಬ್ ಸ್ಫೋಟದ ಬಳಿಕ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿದೆ. ವಿಮಾನ ನಿಲ್ದಾಣ ಸಹಿತ ಆಯಕಟ್ಟಿನ ತಾಣಗಳಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ದೇಶಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.