ಬೆಂಗಳೂರು, ಜ 08 (DaijiworldNews/AK): ಕಾಂಗ್ರೆಸ್ಸಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರಿಗೆ ಸುಳ್ಳು ಹೇಳುವುದು ಮತ್ತು ತುಷ್ಟೀಕರಣದ ರಾಜಕೀಯ ಅತ್ಯಂತ ಸಹಜವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು ಟೀಕಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ನಡೆದ ಬಿಜೆಪಿ ಲೋಕಸಭಾ ಚುನಾವಣಾ ಯೋಜನಾ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಕಾಂಗ್ರೆಸ್ಸಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರಿಗೆ ಸುಳ್ಳು ಹೇಳುವುದು ಮತ್ತು ತುಷ್ಟೀಕರಣದ ರಾಜಕೀಯ ಸಹಜವಾಗಿದೆ. ರಾಜ್ಯ ಸರಕಾರ ಒಂದು ಕೆಜಿ ಅಕ್ಕಿಯನ್ನೂ ಕೊಟ್ಟಿಲ್ಲ. ಸರಿಯಾಗಿ ಹಣವನ್ನೂ ಕೊಡುತ್ತಿಲ್ಲ. ಕೇಂದ್ರ ಸರಕಾರ ಕೊಡುವ ಅಕ್ಕಿ ವಿಚಾರದಲ್ಲಿ ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ ಎಂದು ದೂರಿದರು.
ಹುಬ್ಬಳ್ಳಿ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿಯವರು ಈ ವರೆಗೂ ಬೋಗಸ್ ಸ್ಟೇಟ್ಮೆಂಟ್ ಮುಂದುವರೆಸಿದ್ದಾರೆ ಎಂದರು. ಎಲ್ಲ ಕೇಸುಗಳೂ ಖುಲಾಸೆಯಾಗಿವೆ ಎಂದು ವಿವರಿಸಿದರು.
ಸಿದ್ದರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ್ ಅವರು ಸುಳ್ಳಿನ ಸ್ಪರ್ಧೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.ಡಿಜೆ. ಹಳ್ಳಿ, ಕೆಜಿ ಹಳ್ಳಿ ಗಲಭೆಯ ಆರೋಪಿಗಳು ಇವರಿಗೆ ಅಮಾಯಕರು. ಹುಬ್ಬಳ್ಳಿ ಗಲಭೆ ಸ್ವಲ್ಪ ಮುಂದುವರೆದಿದ್ದರೆ ಕಮೀಷನರ್ಗೇ ಚಪ್ಪಡಿ ಕಲ್ಲು ಹಾಕುತ್ತಿದ್ದರು. ಅವರು ಇವರಿಗೆ ಅಮಾಯಕರು. ಎಲ್ಲ ಕೇಸಿನಲ್ಲಿ ಖುಲಾಸೆ ಆದ ಆಟೋ ಓಡಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುತ್ತಾರೆ. ಅದರ ಕುರಿತು 16 ಪ್ರಕರಣ ಬಾಕಿ ಇದೆ ಎಂದು ಸುಳ್ಳು ಹೇಳುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಾಲ್ಡೀವ್ಸ್ನಲ್ಲಿ 3 ಸಚಿವರ ವಜಾ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿಯವರ ಕಾಲದಲ್ಲಿ ಭಾರತದ ಬಗ್ಗೆ ಅಭಿಮಾನ ಹೆಚ್ಚಾಗಿದೆ. ಭಾರತದ ಬಗ್ಗೆ ಅಸಡ್ಡೆಯನ್ನು ನಮ್ಮ ದೇಶ ಮತ್ತು 140 ಕೋಟಿ ಜನರು ಸಹಿಸುವುದಿಲ್ಲ. ಭಾರತದ ಜನರ ಒಗ್ಗಟ್ಟಿನ ಪರಿಣಾಮದಿಂದ ಇದು ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.
ಶ್ರೀರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದಿದ್ದ ಕಾಂಗ್ರೆಸ್ಸಿಗರು ರಾಮಸೇತುವೆ ಕಾಲ್ಪನಿಕ ಎಂದಿದ್ದರು. ಅಯೋಧ್ಯೆಯಲ್ಲಿ ಅದೇ ಜಾಗದಲ್ಲಿ ಶ್ರೀರಾಮ ಹುಟ್ಟಿದ್ದ ಎಂಬ ಗ್ಯಾರಂಟಿ ಏನೆಂದು ಪ್ರಶ್ನಿಸಿದ್ದರು ಎಂದು ಆಕ್ಷೇಪಿಸಿದರು.