ಲಕ್ನೋ, ಜ 09 (DaijiworldNews/AA): ತನ್ನ ಪತ್ನಿ ಇಡೀ ದಿನ ರೀಲ್ಸ್ ಮಾಡುತ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ಬೇರೆ ವ್ಯಕ್ತಿಗಳೊಂದಿಗೆ ಮಾತನಾಡುತ್ತಾಳೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಗುವನ್ನು ಕೊಂದು ದರೋಡೆಯ ಕಥೆ ಕಟ್ಟಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಲಲಿತ್ಪುರದ ಸದರ್ ಕೊಟ್ವಾಲಿ ಪ್ರದೇಶದ ಚಂದಮಾರಿ ಗ್ರಾಮದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ನೀರಜ್ ಕುಶ್ವಾಹ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ
ಆರೋಪಿಯು ರಾತ್ರಿ 1.30ರ ಸುಮಾರಿಗೆ 6 ಮಂದಿ ದುಷ್ಕರ್ಮಿಗಳು ಮನೆಗೆ ನುಗ್ಗಿದ್ದಾರೆ. ಈ ವೇಳೆ ನನ್ನ ಬಾಯಿಗೆ ಸಾಕ್ಸ್ ತುರುಕಿ, ನನ್ನ ಪತ್ನಿ. ಮಗಳನ್ನು ಹತ್ಯೆ ಮಾಡಿದ್ದಾರೆ. ಜೊತೆಗೆ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಘಟನೆ ವೇಳೆ ತಾನು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಆದರೆ ಆರೋಪಿ ನೀರಜ್ ಮಾತುಗಳನ್ನು ನಂಬದ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆರೋಪಿಯು ತನ್ನ 22 ವರ್ಷದ ಪತ್ನಿ ಹಾಗೂ 1 ವರ್ಷದ ಮಗಳನ್ನು ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವುದಾಗಿ ತಾನು ಎಸಗಿದ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.
ನನ್ನ ಹೆಂಡತಿ ಸುಂದರವಾಗಿದ್ದಳು. ಆದರೆ ಅವಳು ಪೂರ್ತಿ ದಿನ ರೀಲ್ಸ್ ಮಾಡುತ್ತಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಬೇರೆ ವ್ಯಕ್ತಿಗಳೊಂದಿಂಗೆ ಮಾತನಾಡುತ್ತಿದ್ದಳು. ಆಕೆಯಿಂದ ದೂರವಾಗುವ ಯೋಚನೆ ಮಾಡಿದ್ದು, ಅತ್ತಿಗೆಯನ್ನು ಮದುವೆಯಾಗುವ ಅಂದುಕೊಂಡಿದ್ದೆ. ಆದರೆ ಇದಕ್ಕೆ ಆಕೆ ಒಪ್ಪಿಗೆ ಸೂಚಿಸಿರಲಿಲ್ಲ. ಆದ್ದರಿಂದ ಪತ್ನಿ ಹಾಗೂ ಮಗಳನ್ನು ಕೊಲೆ ಮಾಡಿದೆ ಎಂದು ಹೇಳಿದ್ದಾನೆ.
ಇನ್ನು ಆರೋಪಿ ಮನೆಯಲ್ಲಿ ದರೋಡೆಯಾಗಿದೆ ಎಂಬುದನ್ನು ಸಾಬೀತು ಪಡಿಸಲು, ತಾನೇ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ತೆಗೆದಿಟ್ಟಿದ್ದಾನೆ. ಜೊತೆಗೆ ತಾನೇ ಗಾಯಗಳನ್ನು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುತ್ತಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.