ಬೆಂಗಳೂರು,ಏ 22 (Daijiworld News/MSP): ಶ್ರೀಲಂಕಾ ರಾಜಧಾನಿಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದ ಬಳಿಕ ಕೊಲಂಬೊದಲ್ಲಿ ಪ್ರವಾಸದಲ್ಲಿದ್ದ ಕರ್ನಾಟಕದ ಏಳು ಜನರ ಜೆಡಿಎಸ್ ತಂಡ ಬಾಂಬ್ ಸ್ಫೋಟದ ನಂತರ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಚಾರವನ್ನು ಖುದ್ದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ತಿಳಿಸಿದ್ದು, ಏಳು ಜನರಿರುವ ಜೆಡಿಎಸ್ ತಂಡ ಸ್ಫೋಟದ ಬಳಿಕ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಇನ್ನಿಲ್ಲದ ಆಘಾತ ಹಾಗೂ ನೋವಾಗಿದೆ. ಈ ಪೈಕಿ ಇಬ್ಬರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಳೆದು ಹೋಗಿರುವವರ ಪತ್ತೆ ಹಚ್ಚಲು ನಾನು ಭಾರತ ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬೆಂಗಳೂರಿನ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಸೇರಿದ ತಂಡ ಪ್ರವಾಸಕ್ಕೆಂದು ಶ್ರೀಲಂಕಾ ತೆರಳಿದ್ದರು. ಇದಲ್ಲದೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಸಂಬಂಧಿ ಪುರುಷೋತ್ತಮ್ ಎಂವರು ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲಿದ್ದಾರೆ ಎಂದು ತಿಳಿದುಬಂದಿದೆ. ಇವರಿಗೆ ಸ್ಥಳೀಯ ಕೊಲಂಬೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ ನೆಲಮಂಗಲ ಮೂಲದ ಕೆ.ಜಿ ಹನುಮಂತರಾಯಪ್ಪ ಮತ್ತು ರಂಗಪ್ಪ ಎಂಬ ಇಬ್ಬರು ಕನ್ನಡಿಗರು ಸಾವನಪ್ಪಿದ್ದಾರೆ ಎಂದು ಶ್ರೀಲಂಕಾ ಸರ್ಕಾರ ಟ್ವೀಟ್ ಮಾಡಿದೆ.