ಬೆಂಗಳೂರು,ಜ 11 (DaijiworldNews/MS): ಕನ್ನಡ ನಾಮಫಲಕ ಹೋರಾಟದಲ್ಲಿ ಜೈಲು ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಕೊನೆಗೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. 15 ದಿನ ನಿರಂತರವಾಗಿ ಕನ್ನಡ ನಾಮಫಲಕ ಹೋರಾಟಕ್ಕೆ ಬೆಂಬಲಿಸಿದ ರಾಜ್ಯದ ಜನತೆ, ಮಾಧ್ಯಮಗಳು ಸೇರಿ ವಿವಿಧ ಸಂಘಟನೆಗಳಿಗೆ ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಧನ್ಯವಾದ ಸಲ್ಲಿಸಿದ್ದಾರೆ, ಜೊತೆಗೆ ಕಾರ್ಯಕರ್ತರ ಬಳಿ ಕ್ಷಮೆ ಕೇಳಿದ್ದಾರೆ.
ಬಿಡುಗಡೆಯ ಬಳಿಕ ಫೇಸ್ ಬುಕ್ ಮೂಲಕ ಲೈವ್ ಬಂದ ಕರವೇ ಅಧ್ಯಕ್ಷ, ರಾಜ್ಯ ಸರ್ಕಾರ, ನಾಮಫಲಕದಲ್ಲಿ ಶೇ. 60 ಕನ್ನಡ ಬಳಕೆ ಕಡ್ಡಾಯ ಮಾಡಲು ಸುಗ್ರೀವಾಜ್ಞೆ ಜಾರಿ ಮಾಡಲು ನಿರ್ಧರಿಸಿದೆ. ಇದು ಕನ್ನಡಿಗರ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಇದರಲ್ಲಿ ಕಾನೂನು ಹೋರಾಟ ಬಹಳ ಮುಖ್ಯವಾದುದು, ನಮ್ಮ ಎಲ್ಲ ವಕೀಲರು ಸಹ ಶಕ್ತಿ ತುಂಬಿದ್ದಾರೆ ಎಂದಿದ್ದಾರೆ
ಆರೋಗ್ಯದ ಸಮಸ್ಯೆಯಿಂದ ಇಂದು ಯಾರ ಜೊತೆಯೂ ಮಾತನಾಡೋಕೆ ಆಗ್ಲಿಲ್ಲ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ನನ್ನ ದೇಹದ ಕೊನೆಯ ಹನಿ ರಕ್ತ ಇರುವವರೆಗೂ ಕನ್ನಡದ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ಕೆಲವೊಮ್ಮೆ ಹೋರಾಟದಲ್ಲಿ ತೊಡಕಾಗುವುದು ಸಹಜ. ಪ್ರಾಮಾಣಿಕ ಹೋರಾಟದಲ್ಲಿ ಹೀಗೆಲ್ಲಾ ಆಗುತ್ತೆ. ಈಗ ಹದಿನೈದು ದಿನ ನಾನು ಮತ್ತು ನಮ್ಮ ಕಾರ್ಯಕರ್ತರು ಜೈಲು ಶಿಕ್ಷೆ ಅನುಭವಿಸಿದ್ದೇವೆ. ಇನ್ನೂ ಅನೇಕ ಮೊಕದ್ದಮೆಗಳಿವೆ. ಅದಕ್ಕಾಗಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.