ಬೆಂಗಳೂರು,ಏ 22 (Daijiworld News/MSP): ಶ್ರೀಲಂಕಾ ರಾಜಧಾನಿಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದ ಬಳಿಕ ಕೊಲಂಬೊದಲ್ಲಿ ಪ್ರವಾಸದಲ್ಲಿದ್ದ ಕರ್ನಾಟಕದ ಏಳು ಜನರ ಜೆಡಿಎಸ್ ತಂಡದಲ್ಲಿದ್ದ ಐವರು ಸಾವನ್ನಪ್ಪಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಕೊಲಂಬೋಕ್ಕೆ ಪ್ರವಾಸಕ್ಕೆ ತೆರಳಿದ್ದ 7 ಮಂದಿ ಜೆಡಿಎಸ್ ಮುಖಂಡರಲ್ಲಿ, ಹೂವೇನಹಳ್ಳಿ ನಿವಾಸಿ ಶಿವಕುಮಾರ್, ವಿದ್ಯಾರಣ್ಯಪುರ ನಿವಾಸಿ ರಂಗಪ್ಪ, ಬೆಂಗಳೂರಿನ 8ನೇ ಮೈಲಿ ನಿವಾಸಿ ಹನುಮಂತರಾಯಪ್ಪ, ಕಾಚನಹಳ್ಳಿ ನಿವಾಸಿ ಲಕ್ಷ್ಮೀನಾರಾಯಣ ಹಾಗೂ ತುಮಕೂರು ನಿವಾಸಿ ರಮೇಶ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹನುಮಂತರಾಯಪ್ಪ ಹಾಗೂ ರಂಗಪ್ಪ ಸಾವನಪ್ಪಿರುವುದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ. ಇದಲ್ಲದೆ ಮಂಗಳೂರಿನ ಸುರತ್ಕಲ್ ಮಹಿಳೆ ರಝೀನಾ (58ವರ್ಷ) ಸಾವನ್ನಪ್ಪಿದ್ದು ಹೀಗಾಗಿ ಒಟ್ಟು, ಆರು ಮಂದಿ ಕನ್ನಡಿಗರು ಸಾವನ್ನಪ್ಪಿದಂತಾಗಿದೆ.