ನವದೆಹಲಿ, ಜ 11(DaijiworldNews/AA): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಸರ್ಕಾರ ರದ್ದುಗೊಳಿಸಿತ್ತು. ಈ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಕೂಡ ಬೆಂಬಲ ಸೂಚಿಸಿ ಆದೇಶ ಹೊರಡಿಸಿತ್ತು. ಇದೀಗ ಸುಪ್ರೀಂ ನ ಈ ಆದೇಶವನ್ನು ಪ್ರಶ್ನಿಸಿ ಎರಡು ಪ್ರತ್ಯೇಕ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ.
ಡಿ. 11, 2023ರಂದು ಸುಪ್ರೀಂನ ಸಾಂವಿಧಾನಿಕ ಪೀಠವು, ಸಂವಿಧಾನದ ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ 2019ರ ನಿರ್ಧಾರವನ್ನು ಎತ್ತಿಹಿಡಿದಿತ್ತು. ಈ ಸಂದರ್ಭ ಆರ್ಟಿಕಲ್ 370 ಒಂದು ತಾತ್ಕಾಲಿಕ ನಿಬಂಧನೆ ಎಂದು ಸುಪ್ರೀಂ ಹೇಳಿತ್ತು. ಸುಪ್ರೀಂನ ಈ ಆದೇಶವನ್ನು ಪ್ರಶ್ನಿಸಿ ಮುಜಾಫರ್ ಇಕ್ಬಾಲ್ ಖಾನ್ ಎಂಬುವವರು ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಕೇಂದ್ರಾಡಳಿತ ಪ್ರದೇಶವಾಗಿದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಮರುಸ್ಥಾಪನೆ ಮಾಡಲು ಸೂಚನೆ ನೀಡಿತ್ತು. ಸುಪ್ರೀಂನ ಈ ಆದೇಶಕ್ಕೆ ಹಲವಾರು ಟೀಕೆಗಳು ವ್ಯಕ್ತವಾಗಿದ್ದವು.
ಇನ್ನು ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪು ಗೊಂದಲವನ್ನು ಉಂಟುಮಾಡಿದೆ. ಫೆಡರಲಿಸಂ ದೊಡ್ಡ ವಿಧದಲ್ಲಿ ಪರಿಣಾಮವನ್ನುಂಟು ಮಾಡುತ್ತದೆ ಹಾಗೂ ಸಂವಿಧಾನದ ಆರ್ಟಿಕಲ್ 356 ಅನ್ನು ಬೈಪಾಸ್ ಮಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಸುಪ್ರೀಂನ ನಿವೃತ್ತ ನ್ಯಾಯಾಧೀಶರಾದ ನ್ಯಾ.ರೋಹಿಂಟನ್ ನಾರಿಮನ್ ಆರೋಪ ಮಾಡಿದ್ದರು.