ಮಧ್ಯಪ್ರದೇಶ, ಜ 12(DaijiworldNews/AK): ಸರ್ಕಾರಿ ನೌಕರಿ ಸಿಕ್ಕರೆ ಸಾಕು ಅರಾಮ ಜೀವನ ಎನ್ನುವವರೇ ಬಹಳಷ್ಟು ಜನ. ಇನ್ನು ವೈದ್ಯರಾಗಲು, ಐಎಎಸ್ ಪಾಸಾಗಲು ಅದೇಷ್ಟು ಮಂದಿ ಹಗಲು-ರಾತ್ರಿ ಕಷ್ಟಪಡುವವರಿದ್ದಾರೆ. ಆದರೆ, ರಾಜಸ್ಥಾನದ ರೋಮನ್ ಸೈನಿ ಎಂಬ ವ್ಯಕ್ತಿಯು 16ನೇ ವಯಸ್ಸಿಗೆ ಮೆಡಿಕಲ್ ಎಕ್ಸಾಮ್ ಪಾಸಾಗಿ ವೈದ್ಯನಾದ. ಅಷ್ಟೇ ಅಲ್ಲ, 22ನೇ ವಯಸ್ಸಿಗೆ ಐಎಎಸ್ ಪಾಸಾಗಿ ಉನ್ನತ ಹುದ್ದೆಗೆ ಗಿಟ್ಟಿಸಿಕೊಂಡ. ಆದರೆ, ಎರಡೂ ಕೆಲಸ ಬಿಟ್ಟು ರೊಮನ್ ಸೈನಿ 26 ಸಾವಿರ ಕೋಟಿ ರೂ. ಮೌಲ್ಯದ ಬೃಹತ್ ಕಂಪನಿ ಕಟ್ಟಿದ್ದಾರೆ. ಇವರ ಯಶಸ್ಸಿನ ಕಥೆ ಇಲ್ಲಿದೆ.
ರಾಜಸ್ಥಾನದ ರೋಮನ್ ಸೈನಿ ಅವರು ಪ್ರತಿಭಾವಂತ ಪ್ರತಿಭೆ. ಇವರು 16ನೇ ವಯಸ್ಸಿಗೆ ಏಮ್ಸ್ ಪ್ರವೇಶ ಪರೀಕ್ಷೆ ಪಾಸಾಗಿ, ಎಂಬಿಬಿಎಸ್ ಪದವಿ ಪಡೆದು ಆರು ತಿಂಗಳು ಏಮ್ಸ್ನಲ್ಲಿ ಕೆಲಸ ಮಾಡಿದರು. . ಆದರೆ ಸೈನಿ ಇನ್ನು ಏನಾದರೂ ಸಾಧನೆ ಮಾಡಬೇಕು ಎಂದು ಐಎಎಸ್ ಅಧ್ಯಯನ ಮಾಡಲು ಆರಂಭಿಸಿದರು. ಕೇವಲ 22ನೇ ವಯಸ್ಸಿಗೆ ಅವರು ಐಎಎಸ್ ಪಾಸಾಗಿ, ಮಧ್ಯಪ್ರದೇಶದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದರು. ಆದರೆ, ಅಷ್ಟಕ್ಕೂ ಸುಮ್ಮನಾಗದ ರೋಮನ್ ಸೈನಿ, ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದರು.
ಬಳಿಕ ರೋಮನ್ ಸೈನಿ, ಗೆಳೆಯ ಗೌರವ್ ಮುಂಜಾಲ್ ಸಹಯೋಗದಿಂದ ಅನ್ಅಕಾಡೆಮಿ (Unacademy) ಎಂಬ ಆನ್ಲೈನ್ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು.ಈ ಅನ್ಅಕಾಡೆಮಿಯಿಂದ ಲಕ್ಷಾಂತರ ಜನ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗಿದೆ. ರೋಮನ್ ಸೈನಿ ಹಾಗೂ ಗೌರವ್ ಮುಂಜಾಲ್ ಕಟ್ಟಿದ ಅನ್ಅಕಾಡೆಮಿ ಸಂಸ್ಥೆಯು ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದೆ. ಇವರ ಸಂಸ್ಥೆಯ ಮೌಲ್ಯವು 26 ಸಾವಿರ ಕೋಟಿ ರೂಪಾಯಿ ಆಗಿದೆ. ಈ ಮುಖೇನ ಜೀವನದಲ್ಲಿ ಸರ್ಕಾರಿ ಉದ್ಯೋಗ ಪಡೆದರೆ ಮಾತ್ರ ಯಶಸ್ಸು ಅಲ್ಲ, ವೈದ್ಯನಾದ್ರೆ ಮಾತ್ರ ಜೀವನ ಸಾರ್ಥಕತೆ ಅಲ್ಲ. ಉದ್ಯಮದ ಮೂಲಕವೂ ಲಕ್ಷಾಂತರ ಜನರಿಗೆ ದಾರಿದೀಪವಾಗಬಹುದು ಎಂಬುದನ್ನು ಸೈನಿ ಸಾಧಿಸಿ ತೋರಿಸಿಕೊಟ್ಟಿದ್ದಾರೆ.